ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ (Winter Session) ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿಪಡೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರ ಸಲಹೆಯೇ ಪ್ರಮುಖ ಕಾರಣ ಎನ್ನಲಾಗಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ (R. Ashoka) ಮತ್ತು ಸುರೇಶ್ ಬಾಬು (Suresh Babu) ಅವರಿಗೆ ಈ ನಿರ್ಧಾರ ಕೈಬಿಡುವಂತೆ ಸಲಹೆ ನೀಡಿದ್ದಾರೆ.
ನಾವು ಅವಿಶ್ವಾಸ ನಿರ್ಣಯ ಮಂಡಿಸಿದರೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಬಣ ರಾಜಕೀಯ (Factionalism) ಮತ್ತು ಗೊಂದಲಗಳು ಶಮನಗೊಂಡು, ಆಂತರಿಕವಾಗಿ ಒಗ್ಗಟ್ಟು (Unity) ಮೂಡಬಹುದು. ನಾವು ಅವರನ್ನ ಒಗ್ಗಟ್ಟಿಗೆ ಕಾರಣ ಆಗೋದು ಬೇಡ ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಗೊಂದಲಗಳು ಮತ್ತು ಆಂತರಿಕ ಸಮಸ್ಯೆಗಳು ನೇರವಾಗಿ ಜನರಿಗೆ ತಲುಪಬೇಕು. ಈ ಸಮಯದಲ್ಲಿ ವಿರೋಧ ಪಕ್ಷಗಳು ನಿರ್ಣಯ ಮಂಡಿಸಿ ಕಾಂಗ್ರೆಸ್‌ಗೆ ರಕ್ಷಣಾತ್ಮಕ ಅವಕಾಶ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ನಿರ್ಧಾರದಿಂದ ಹಿಂದೆ ಸರಿದಿರುವ ಬಗ್ಗೆ ಮಾಹಿತಿ ಇದೆ.
ಇದರಿಂದಾಗಿ, ಚಳಿಗಾಲದ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ದೋಸ್ತಿ ಪಕ್ಷಗಳ ಮೊದಲ ಪ್ರಯತ್ನ ಸದ್ಯಕ್ಕೆ ಮುಂದಕ್ಕೆ ಹೋಗಿದೆ.






