ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಬಗ್ಗೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಎತ್ತಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ (DCM D.K. Shivakumar) ನೀಡಿದ ಉತ್ತರ ತೀವ್ರ ವಾಗ್ವಾದಕ್ಕೆ ಕಾರಣವಾಗಿ, ಯತ್ನಾಳ್ ಅವರು ಸಭಾತ್ಯಾಗ (Walkout) ಮಾಡಿದರು.
ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ (UKP)ಕುರಿತು ಮಾತನಾಡಿದ ಯತ್ನಾಳ್ ಅವರು, ಕೃಷ್ಣಾ ಮೇಲ್ದಂಡೆ ಕಾಮಗಾರಿ ಕಳೆದ ಆರು ದಶಕಗಳಿಂದ ಪೂರ್ಣಗೊಂಡಿಲ್ಲ, ಮೊದಲ ಹಂತದಲ್ಲಿ 173 ಟಿಎಂಸಿ ನೀರು ಬಳಸಲು ₹120 ಕೋಟಿ ಖರ್ಚ, ಎರಡನೇ ಹಂತದಲ್ಲಿ ₹54,257 ಕೋಟಿ ಖರ್ಚು, ಹಾಗೂ ಮೂರನೇ ಹಂತ (ಅಂದಾಜು): ₹70 ಸಾವಿರ ಕೋಟಿ ಸೇರಿದಂತೆ ಯೋಜನೆ ಸಂಪೂರ್ಣವಾಗಲು ₹1 ಲಕ್ಷ 20 ಸಾವಿರ ಕೋಟಿ ವೆಚ್ಚವಾಗುವ ಅಂದಾಜು ಇದೆ.
ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕದಿಂದ ತುಮಕೂರುವರೆಗೂ ನೀರು ಹೋಗಲಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ವಿಶ್ವಬ್ಯಾಂಕ್‌ನಿಂದ (World Bank) ಹಣ ಪಡೆದು ಮುಗಿಸುವಂತೆ ಯತ್ನಾಳ್ ಒತ್ತಾಯಿಸಿದರು.
ಡಿಕೆಶಿ ಮತ್ತು ಯತ್ನಾಳ್ ನಡುವೆ ವಾಗ್ವಾದ:
ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ನಾನು ಮತ್ತು ಸಿಎಂ ಎಲ್ಲಾ ವಿಚಾರ ಚರ್ಚೆ ಮಾಡಿದ್ದೇವೆ. ಮಹಾರಾಷ್ಟ್ರದ ಜೊತೆ ಅವಾರ್ಡ್ (Award) ಆಗಬೇಕು ಎಂದು ಪ್ರಯತ್ನಿಸಿದ್ದೇವೆ. ಹಣ ಎಲ್ಲಿಂದ ತರಬೇಕು ಎಂಬ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಕೆಲಸಗಳು ಶೀಘ್ರ ಆರಂಭವಾಗಲಿವೆ ಎಂದು ಹೇಳಿದರು.
ಮುಂದುವರೆಯುತ್ತಾ, ದೆಹಲಿಯಲ್ಲಿ ನಿಮಗೆ ಸ್ನೇಹಿತರಿದ್ದಾರೆ (ಪ್ರಧಾನಿ ಮೋದಿ) ಎಂದು ಹೇಳಿದ್ದೀರಲ್ಲ, ಅವರಿಗೆ ಹೇಳಿ ಅವಾರ್ಡ್ ಮಾಡಿಸಿಕೊಡಿ, ನಾವು ಕಾಮಗಾರಿ ಮಾಡ್ತೇವೆ ಎಂದು ಯತ್ನಾಳ್ ಅವರಿಗೆ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು. ಇದಕ್ಕೆ ಯತ್ನಾಳ್, “ನಾವು ಪಕ್ಷಾತೀತವಾಗಿ ದೆಹಲಿಗೆ ಬಂದು ಒತ್ತಡ ಹಾಕುತ್ತೇವೆ, ನಿಯೋಗ ಕರೆದುಕೊಂಡು ಹೋಗಿ” ಎಂದು ಆಗ್ರಹಿಸಿದರು.
ಭೂಮಿ ಪರಿಹಾರದ ಮಾಫಿಯಾ ಆರೋಪ:
ಇದೇ ವೇಳೆ 1974 ರಿಂದ ಜಮೀನು ಕಳೆದುಕೊಂಡ ಸುಮಾರು 59 ಸಾವಿರ ಕೇಸ್‌ಗಳು ವಿಜಯಪುರ ನ್ಯಾಯಾಲಯದಲ್ಲಿದೆ. ಹಣ ಬಿಡುಗಡೆ ಮಾಡಬೇಕು ಎಂದು ಯತ್ನಾಳ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇದು ಒಂದು ಮಾಫಿಯಾ (Mafia). 10 ಲಕ್ಷ ಮೌಲ್ಯದ ಭೂಮಿಗೆ 10 ಕೋಟಿ ಮಾಡಿದ್ದಾರೆ. ಅವರು ಅಡ್ಜಸ್ಟ್ ಮಾಡಿಕೊಂಡಿದ್ದರೆ ನಾನು ಅಷ್ಟು ಕೊಡೋದಕ್ಕೆ ತಯಾರಿಲ್ಲ ಎಂದು ನೇರವಾಗಿ ಹೇಳಿ ಪರಿಹಾರ ಕೊಡಲು ನಿರಾಕರಿಸಿದರು.
ನ್ಯಾಯಾಲಯದ ಆದೇಶವನ್ನು ಒಪ್ಪದೇ, ರೈತರ ಬಗ್ಗೆ ಅಪಮಾನಕಾರಿಯಾಗಿ ಮಾತಾಡಿದ್ದಾರೆ ಎಂದು ಆಕ್ರೋಶಗೊಂಡ ಯತ್ನಾಳ್, ಪ್ರತಿಭಟಿಸಿ ಸದನದಿಂದ ಸಭಾತ್ಯಾಗ ಮಾಡಿದರು.






