ಬೆಳಗಾವಿ : ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಸ್ಥಾನದ ಗೊಂದಲದ ಚರ್ಚೆಗಳು ಮತ್ತೆ ಮುಂಚೂಣಿಗೆ ಬಂದಿರುವ ಮಧ್ಯೆಯೇ, ಇಂದು ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP – Congress Legislative Party) ಸಭೆ ನಡೆಯಲಿದ್ದು, ಈ ಸಭೆಯು ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ ಕೂಟದ ಬಳಿಕ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು, ಅಧಿವೇಶನದ ವೇಳೆಯೇ ಮತ್ತೆ ಮುಂಚೂಣಿಗೆ ಬಂದಿವೆ.
ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, “ಮುಂದಿನ 5 ವರ್ಷಗಳ ಕಾಲ ತಂದೆಯವರೇ ಮುಖ್ಯಮಂತ್ರಿ” ಎಂದು ಪುನರುಚ್ಚರಿಸಿದ್ದು, ಡಿ.ಕೆ. ಶಿವಕುಮಾರ್ ಅವರ ಬಣದಲ್ಲಿ ಅಸಮಾಧಾನ ಮೂಡಿಸಿದೆ. ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿ ಆಪ್ತ ಬಣದ ಶಾಸಕರು, “ಆಲ್ ದಿ ಬೆಸ್ಟ್, ಈ ವಿಷಯವನ್ನು ಸಿಎಲ್‌ಪಿ ಸಭೆಯಲ್ಲಿ ಕೇಳುತ್ತೇವೆ” ಎಂದು ಕೌಂಟರ್ ನೀಡಿದ್ದರು.
ಪಕ್ಷದ ಹೈಕಮಾಂಡ್ (High Command) ಎಚ್ಚರಿಕೆ ನಡುವೆಯೂ ಡಿ.ಕೆ.ಶಿ ಆಪ್ತ ಶಾಸಕರು ಮತ್ತು ಮುಖಂಡರ ಮಾತಿನ ಸಮರ ಮುಂದುವರಿದಿದೆ.
ಸಿಎಲ್‌ಪಿ ಸಭೆಯ ಗುರಿ:
ಇಂದು ನಡೆಯಲಿರುವ ಈ ನಿರ್ಣಾಯಕ ಸಿಎಲ್‌ಪಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆಯೇ ಚರ್ಚೆ ಆಗಲಿದೆಯೇ? ಅಥವಾ ಕೇವಲ ಅಧಿವೇಶನದ (Session) ಚರ್ಚೆಗಳಿಗೆ ಮತ್ತು ಸದನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳಿಗೆ ಸಭೆ ಸೀಮಿತವಾಗಲಿದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಈ ಸಭೆಯಲ್ಲಿ ಡಿ.ಕೆ.ಶಿ ಆಪ್ತ ಬಣದಿಂದ ಮತ್ತೆ ‘ಕುರ್ಚಿ’ ಕದನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಸಿಡಿದೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.






