ಗೋವಾ: ಅರ್ಪೋರಾದ ‘ಬರ್ಚ್ ಬೈ ರೋಮಿಯೋ ಲೇನ್’ (Birch By Romeo Lane) ನಲ್ಲಾದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಪ್ರಾಣ ಕಳೆದುಕೊಂಡ ಘಟನೆ ಇಡೀ ಗೋವಾವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯು ಕೇವಲ ಒಂದು ಅಪಘಾತವಷ್ಟೇ ಅಲ್ಲ, ಉತ್ತರ ಗೋವಾದ ಕರಾವಳಿ ತೀರದಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ದಂಧೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಹಿಡಿದ ಕನ್ನಡಿಯಾಗಿದೆ. ಈ ದುರಂತವು, ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಅಕ್ರಮ ಕ್ಲಬ್‌ಗಳ ಮೇಲಿನ ಪರದೆಯನ್ನು ಸರಿಸಿದಂತಾಗಿದೆ.
ಕ್ಯಾಂಡೋಲಿಮ್, ಕಲಂಗುಟ್, ಅಂಜುನಾ, ವಾಗೇತುರ್ ಮತ್ತು ಮೋರ್ಜಿಮ್ ಭಾಗಗಳಲ್ಲಿನ ಹಲವಾರು ನೈಟ್‌ಕ್ಲಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿವೆ. ಅಗ್ನಿಶಾಮಕ ದಳದ ನಿರಾಕ್ಷೇಪಣಾ ಪತ್ರ (NOC), ಅಬಕಾರಿ ಪರವಾನಗಿ, ಆಹಾರ ಸುರಕ್ಷತೆ ಅನುಮತಿ, ಪ್ರವಾಸೋದ್ಯಮ ಪರವಾನಗಿ ಅಥವಾ ಕಟ್ಟಡದ ಸ್ವಾಧೀನ ಪತ್ರ (Occupancy Certificate) ಇಲ್ಲದಿದ್ದರೂ, ಈ ಉದ್ಯಮಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವುದು ಸ್ಥಳೀಯರ ಮತ್ತು ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.
ಉಲ್ಲಂಘನೆಯ ಸರಮಾಲೆ ಮತ್ತು ಕಣ್ಣೊರೆಸುವ ತಂತ್ರ
ಕಳೆದ ಕೆಲವು ವರ್ಷಗಳಿಂದ, ಶಬ್ದ ಮಾಲಿನ್ಯ ಮಿತಿ ಮೀರುವುದು, ಅಗ್ನಿ ಸುರಕ್ಷತೆಯ ಕೊರತೆ ಮತ್ತು ಅಕ್ರಮ ನಿರ್ಮಾಣಗಳಿಗಾಗಿ ಅಧಿಕಾರಿಗಳು ಅನೇಕ ಕ್ಲಬ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದರು. ಆದರೆ, ಸೀಲ್ ಮಾಡಲಾದ ಕ್ಲಬ್‌ಗಳು ಕೆಲವೇ ದಿನಗಳಲ್ಲಿ ಮೂಲ ಸಮಸ್ಯೆಗಳನ್ನು ಬಗೆಹರಿಸದೆಯೇ ಮತ್ತೆ ಬಾಗಿಲು ತೆರೆಯುತ್ತಿವೆ. “ಅಧಿಕಾರದಲ್ಲಿರುವವರ ರಕ್ಷಣೆ ಇಲ್ಲದೆ, 1,000 ಸಾಮರ್ಥ್ಯದ ನೈಟ್‌ಕ್ಲಬ್‌ಗಳನ್ನು ಅಗ್ನಿ ಸುರಕ್ಷತೆ ಅಥವಾ ಕಟ್ಟಡದ ಅನುಮತಿಯಿಲ್ಲದೆ ನಡೆಸಲು ಸಾಧ್ಯವೇ ಇಲ್ಲ,” ಎಂದು ಕಲಂಗುಟ್ ಕ್ಷೇತ್ರದ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಪ್ರೇಮಾನಂದ್ ದಿವ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಅರ್ಪೋರಾ ದುರಂತದ ನಂತರ, ಅದೇ ಮಾಲೀಕತ್ವದ ಅಡಿಯಲ್ಲಿರುವ ವಾಗೇತುರ್‌ನ ‘ರೋಮಿಯೋ ಲೇನ್’ ನೈಟ್‌ಕ್ಲಬ್ ಮೇಲೂ ಈಗ ಸಂಶಯದ ದೃಷ್ಟಿ ಬಿದ್ದಿದೆ. ಪರವಾನಗಿ ಅನಿರ್ಧಿಷ್ಟತೆ ಮತ್ತು ಶಬ್ದ ನಿಯಮಗಳ ಉಲ್ಲಂಘನೆಗಾಗಿ ಈ ಹಿಂದೆ ಹಲವು ಬಾರಿ ಪ್ರಕರಣ ದಾಖಲಾಗಿದ್ದರೂ, ಈ ಕ್ಲಬ್ ಪ್ರತಿ ಸೀಸನ್‌ನಲ್ಲೂ ತನ್ನ ದಂಧೆಯನ್ನು ಮುಂದುವರಿಸಿಕೊಂಡು ಬಂದಿದೆ. ಇದು ಕೇವಲ ರೋಮಿಯೋ ಲೇನ್ ಕತೆಯಲ್ಲ, ಕರಾವಳಿಯುದ್ದಕ್ಕೂ ಇದೇ ಮಾದರಿಯ ಅಕ್ರಮಗಳು ಎಗ್ಗಿಲ್ಲದೆ ಸಾಗುತ್ತಿವೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳ ಶಾಮೀಲು?
ವ್ಯವಹಾರದ ಮಾಲೀಕರು, ಪಂಚಾಯತ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ನಡುವಿನ ಅಕ್ರಮ ನಂಟಿನಿಂದಾಗಿ ಈ ಕಾನೂನುಬಾಹಿರ ಚಟುವಟಿಕೆಗಳು ವರ್ಧಿಸುತ್ತಿವೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. “ನೀವು ಅವರನ್ನು ವಾರಾಂತ್ಯದಲ್ಲಿ ಮುಚ್ಚಿಸಿದರೆ, ಸೋಮವಾರದ ಹೊತ್ತಿಗೆ ಅವರು ಮತ್ತೆ ತೆರೆಯುತ್ತಾರೆ. ಅಕ್ರಮ ದಂಧೆಗಳು ವರ್ಷಗಟ್ಟಲೆ ನಡೆಯುತ್ತಿವೆ ಎಂದರೆ, ಪ್ರಬಲ ವ್ಯಕ್ತಿಗಳ ಕೃಪಾಕಟಾಕ್ಷವಿಲ್ಲದೆ ಅದು ಸಾಧ್ಯವಿಲ್ಲ” ಎಂದು ವಾಗೇತುರ್ ನಿವಾಸಿ ಜಾವಿಶ್ ಮೋನಿಜ್ ಹೇಳಿದ್ದಾರೆ.
ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಅಕ್ರಮ ನಿರ್ಮಾಣಗಳು ಮತ್ತು ಶಬ್ದ ಮಾಲಿನ್ಯದ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದರೂ, ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ಪಂಚಾಯತ್ ಕಾಯ್ದೆಯ ಪ್ರಕಾರ, ಅಗ್ನಿ ಸುರಕ್ಷತೆ ಅಥವಾ ಸ್ವಾಧೀನ ಪತ್ರವಿಲ್ಲದಿದ್ದರೆ ಪರವಾನಗಿಯನ್ನು ರದ್ದುಗೊಳಿಸಬೇಕು. ಆದರೆ ರಾಜಕೀಯವಾಗಿ ಪ್ರಭಾವಿ ಉದ್ಯಮಗಳ ವಿಷಯದಲ್ಲಿ ಪಂಚಾಯತ್‌ಗಳು ಕಾನೂನು ಪಾಲಿಸುತ್ತಿಲ್ಲ ಎಂದು ನಿವೃತ್ತ ಪಂಚಾಯತ್ ಕಾರ್ಯದರ್ಶಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಅರ್ಪೋರಾ ಬೆಂಕಿ ಅವಘಡವು ಕೇವಲ ಕ್ಲಬ್ ಮಾಲೀಕರನ್ನಷ್ಟೇ ಅಲ್ಲ, ಇಂತಹ ಅಕ್ರಮಗಳಿಗೆ ಮೂಕಸಮ್ಮತಿ ನೀಡಿದ ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.






