ಕಾರವಾರ: ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿರುವ ಪ್ರಸಿದ್ಧ ಸ್ಕೂಬಾ ಡೈವಿಂಗ್ ಸಂಸ್ಥೆ ‘ನೇತ್ರಾಣಿ ಅಡ್ವೆಂಚರ್ಸ್’ನ (Netrani Adventures) ಅಧಿಕೃತ ಗೂಗಲ್ ಬಿಸಿನೆಸ್ ಖಾತೆಯನ್ನು ಹ್ಯಾಕ್ ಮಾಡಿ, ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ವಂಚಕರು ಸಂಸ್ಥೆಯ ಗೂಗಲ್ ಪ್ರೊಫೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಅದರಲ್ಲಿನ ಅಧಿಕೃತ ಸಂಪರ್ಕ ಸಂಖ್ಯೆಯನ್ನು ಬದಲಿಸಿ, ತಮ್ಮ ಮೊಬೈಲ್ ಸಂಖ್ಯೆಯನ್ನು ಸೇರಿಸುವ ಮೂಲಕ ಪ್ರವಾಸಿಗರಿಗೆ ವಂಚಿಸುತ್ತಿದ್ದಾರೆ.
ದೂರಿನ ಪ್ರಕಾರ, ವಂಚಕರು ಗೂಗಲ್ ಪ್ರೊಫೈಲ್‌ನಲ್ಲಿ ತಮ್ಮ ವಾಟ್ಸಾಪ್ ಸಂಖ್ಯೆಯಾದ 7090059002 ಅನ್ನು ಸೇರಿಸಿದ್ದಾರೆ. ಸ್ಕೂಬಾ ಡೈವಿಂಗ್ ಬುಕ್ಕಿಂಗ್ ಮಾಡಲು ಗೂಗಲ್‌ನಲ್ಲಿ ಸರ್ಚ್ ಮಾಡುವ ಗ್ರಾಹಕರು ಈ ನಕಲಿ ಸಂಖ್ಯೆಯನ್ನು ನಂಬಿ ಸಂಪರ್ಕಿಸಿದಾಗ, ಬುಕ್ಕಿಂಗ್ ಹೆಸರಿನಲ್ಲಿ ಅವರಿಂದ ಹಣ ಪಡೆದು ಮೋಸ ಮಾಡಲಾಗುತ್ತಿದೆ. ಈ ಕುರಿತು ಸಂಸ್ಥೆಯ ಮ್ಯಾನೇಜರ್ ಗಣೇಶ ಹರಿಕಾಂತ ಅವರು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ಮಾಲೀಕರಾದ ಗಣೇಶ್ ಹರಿಕಾಂತ್ ಅವರು “ಗ್ರಾಹಕರು ಮತ್ತು ಪ್ರವಾಸಿಗರು ಯಾವುದೇ ಹಣ ಪಾವತಿ ಮಾಡುವ ಮುನ್ನ ಎಚ್ಚರ ವಹಿಸಬೇಕು. ಬುಕ್ಕಿಂಗ್‌ಗಾಗಿ ನಮ್ಮ ಅಧಿಕೃತ ವೆಬ್‌ಸೈಟ್ https://netraniadventures.com/ ಅಥವಾ ಅಧಿಕೃತ ಮೊಬೈಲ್ ಸಂಖ್ಯೆ 9900431111 ಅನ್ನು ಮಾತ್ರ ಬಳಸಬೇಕು” ಎಂದು ವಿನಂತಿಸಿದ್ದಾರೆ.
ಯಾವುದೇ ಸಂಶಯಾಸ್ಪದ ಸಂಖ್ಯೆ ಅಥವಾ ಲಿಂಕ್‌ಗಳ ಮೂಲಕ ಹಣದ ಬೇಡಿಕೆ ಬಂದರೆ ತಕ್ಷಣವೇ ಸೈಬರ್ ಕ್ರೈಂ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.






