ವಾಷಿಂಗ್ಟನ್: ಭಾರತ ಸೇರಿದಂತೆ ಕೆಲವು ದೇಶಗಳು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ಅಗ್ಗದ ದರದಲ್ಲಿ “ಡಂಪ್” (ಸುರಿಯುತ್ತಿವೆ) ಮಾಡುತ್ತಿವೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಅಕ್ಕಿಯ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. “ಅವರು ಈ ರೀತಿ ಮಾಡಲು ಸಾಧ್ಯವಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, ಅಮೆರಿಕದ ರೈತರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ.
ಸೋಮವಾರ ಶ್ವೇತಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅಮೆರಿಕದ ರೈತರಿಗಾಗಿ $12 ಬಿಲಿಯನ್ (ಸುಮಾರು 1 ಲಕ್ಷ ಕೋಟಿ ರೂ.) ಹೊಸ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವ ವೇಳೆ ಟ್ರಂಪ್ ಈ ವಿಷಯ ಪ್ರಸ್ತಾಪಿಸಿದರು. ಕೆನಡಿ ರೈಸ್ ಮಿಲ್ಸ್‌ನ ಸಿಇಒ ಮೆರಿಲ್ ಕೆನಡಿ ಅವರು ಅಕ್ಕಿ ಬೆಲೆ ಕುಸಿತದ ಬಗ್ಗೆ ಅಧ್ಯಕ್ಷರ ಗಮನ ಸೆಳೆದಾಗ, ಭಾರತ, ಥೈಲ್ಯಾಂಡ್ ಮತ್ತು ಚೀನಾ ದೇಶಗಳು ಅಮೆರಿಕಕ್ಕೆ ಅಕ್ಕಿಯನ್ನು ಡಂಪ್ ಮಾಡುತ್ತಿವೆ ಎಂಬ ಆರೋಪ ಕೇಳಿಬಂತು. ಈ ಪಟ್ಟಿಯನ್ನು ಪರಿಶೀಲಿಸಿದ ಟ್ರಂಪ್, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಟ್ರಂಪ್ ಮತ್ತು ಅಧಿಕಾರಿಗಳ ನಡುವಿನ ಸಂಭಾಷಣೆ
ಸಭೆಯಲ್ಲಿ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರನ್ನು ಪ್ರಶ್ನಿಸಿದ ಟ್ರಂಪ್, “ಭಾರತದ ಬಗ್ಗೆ ಹೇಳಿ. ಅವರಿಗೆ ಈ ರೀತಿ ಮಾಡಲು ಏಕೆ ಅವಕಾಶ ನೀಡಲಾಗಿದೆ? ಅವರು ಸುಂಕವನ್ನು ಪಾವತಿಸುತ್ತಾರೆಯೇ ಅಥವಾ ಅವರಿಗೆ ಅಕ್ಕಿಯ ಮೇಲೆ ವಿನಾಯಿತಿ ಇದೆಯೇ?” ಎಂದು ಕೇಳಿದರು. ಇದಕ್ಕೆ ಉತ್ತರಿಸಲು ಪ್ರಯತ್ನಿಸಿದ ಬೆಸೆಂಟ್, “ಇಲ್ಲ ಸರ್, ನಾವು ಇನ್ನೂ ಅವರೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ಕೆಲಸ ಮಾಡುತ್ತಿದ್ದೇವೆ…” ಎಂದು ಹೇಳುತ್ತಿರುವಾಗಲೇ ಮಧ್ಯಪ್ರವೇಶಿಸಿದ ಟ್ರಂಪ್, “ಹೌದು, ಆದರೆ ಅವರು ಡಂಪಿಂಗ್ ಮಾಡಬಾರದು. ನಾನು ಇದನ್ನು ಇತರರಿಂದಲೂ ಕೇಳಿದ್ದೇನೆ. ನೀವು ಹಾಗೆ ಮಾಡಲು ಸಾಧ್ಯವಿಲ್ಲ (You can’t do that)” ಎಂದು ಕಟುವಾಗಿ ನುಡಿದರು.
ಕೆನಡಾ ರಸಗೊಬ್ಬರದ ಮೇಲೂ ಕಣ್ಣು
ಇದೇ ವೇಳೆ, ಕೆನಡಾದಿಂದ ಆಮದಾಗುವ ರಸಗೊಬ್ಬರದ ಮೇಲೂ ಟ್ರಂಪ್ ಕೆಂಗಣ್ಣು ಬೀರಿದ್ದಾರೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೆನಡಾದ ರಸಗೊಬ್ಬರದ ಮೇಲೆ ಕಠಿಣ ಸುಂಕ ವಿಧಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. “ಬಹಳಷ್ಟು ರಸಗೊಬ್ಬರ ಕೆನಡಾದಿಂದ ಬರುತ್ತಿದೆ. ಅಗತ್ಯವಿದ್ದರೆ ನಾವು ಅದರ ಮೇಲೆ ತೀವ್ರವಾದ ಸುಂಕಗಳನ್ನು ವಿಧಿಸುತ್ತೇವೆ. ನಾವೇ ಇಲ್ಲಿ ಅದನ್ನು ಉತ್ಪಾದಿಸಬಹುದು” ಎಂದು ಟ್ರಂಪ್ ಪ್ರತಿಪಾದಿಸಿದರು.
ಪ್ರಸ್ತುತ ಹಣದುಬ್ಬರ ಮತ್ತು ಬೆಲೆ ಏರಿಕೆಯ ಒತ್ತಡದಲ್ಲಿರುವ ಅಮೆರಿಕದ ರೈತರು ಟ್ರಂಪ್ ಅವರ ಪ್ರಮುಖ ಮತಬ್ಯಾಂಕ್ ಆಗಿದ್ದಾರೆ. ಭಾರತ ಮತ್ತು ಕೆನಡಾ ಜೊತೆಗಿನ ವ್ಯಾಪಾರ ಮಾತುಕತೆಗಳು ಕ್ಲಿಷ್ಟಕರವಾಗಿರುವ ಈ ಸಂದರ್ಭದಲ್ಲಿ, ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈ ವಾರ ಅಮೆರಿಕದ ನಿಯೋಗವೊಂದು ಹೆಚ್ಚಿನ ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.






