ಉಡುಪಿ: ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದ ಉಡುಪಿಯ ಉದ್ಯಾವರ ಮೂಲದ ಮಹಿಳೆಯೊಬ್ಬರು ಸೈಬರ್ ಖದೀಮರ ಬಲೆಯಲ್ಲಿ ಬಿದ್ದು ಬರೋಬ್ಬರಿ 31 ಲಕ್ಷ ರೂಪಾಯಿ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.
ವಿಜಯಲಕ್ಷ್ಮೀ ಎಂಬುವವರು ಫೇಸ್‌ಬುಕ್‌ನಲ್ಲಿ ಬಂದ ‘ವರ್ಕ್ ಫ್ರಂ ಹೋಮ್’ (Work From Home) ಜಾಹೀರಾತನ್ನು ನೋಡಿ ಲಿಂಕ್ ಕ್ಲಿಕ್ ಮಾಡಿದ್ದರು. ಬಳಿಕ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ ವಂಚಕಿ, ತಾನು ‘ಶೆನ್‌ಎಸ್‌ಇ ಕಾರ್ಪೊರೇಟ್’ ಕಚೇರಿಯ ಎಚ್‌ಆರ್ ಎಂದು ಪರಿಚಯಿಸಿಕೊಂಡಿದ್ದಳು. ಅರೆಕಾಲಿಕ ಕೆಲಸ ನೀಡುವುದಾಗಿ ನಂಬಿಸಿ, ಆರಂಭದಲ್ಲಿ ಎರಡು ಟಾಸ್ಕ್‌ಗಳನ್ನು ನೀಡಿ, ಅದನ್ನು ಪೂರ್ಣಗೊಳಿಸಿದಾಗ ಹಣ ಪಾವತಿಸಿ ವಿಜಯಲಕ್ಷ್ಮೀ ಅವರ ವಿಶ್ವಾಸ ಗಳಿಸಿದ್ದಳು.
ಡಿಸೆಂಬರ್ 1 ರಂದು ಮತ್ತೊಂದು ಲಿಂಕ್ ಕಳುಹಿಸಿ ಟೆಲಿಗ್ರಾಮ್ ಖಾತೆಯೊಂದಕ್ಕೆ ಸೇರಿಸಲಾಯಿತು. ‘ಗುಹಾ ಅನುಸೂಯ’ ಎಂಬ ಹೆಸರಿನ ಟೆಲಿಗ್ರಾಮ್ ಖಾತೆಯ ಮೂಲಕ ಸಂಪರ್ಕಿಸಿದ ವಂಚಕರು, 1,000, 3,000 ಅಥವಾ 5,000 ರೂ. ಹೂಡಿಕೆ ಮಾಡಿದರೆ ಶೇ. 30 ರಿಂದ 40 ರಷ್ಟು ಲಾಭಾಂಶ ಸಿಗುತ್ತದೆ ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿದ ವಿಜಯಲಕ್ಷ್ಮೀ, ಆರಂಭದಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು 3,900 ರೂ. ಲಾಭಾಂಶವನ್ನು ವಾಪಸ್ ನೀಡಿ ನಂಬಿಕೆ ಬರುವಂತೆ ಮಾಡಿದ್ದರು.
ಹೆಚ್ಚಿನ ಲಾಭದ ಆಸೆಗೆ ಬಿದ್ದ ವಿಜಯಲಕ್ಷ್ಮೀ, ಡಿಸೆಂಬರ್ 1 ರಿಂದ 4 ರವರೆಗೆ ಹಂತ ಹಂತವಾಗಿ ಒಟ್ಟು 31,00,067 ರೂಪಾಯಿಗಳನ್ನು ಯುಪಿಐ ಮೂಲಕ ವಂಚಕರು ನೀಡಿದ ಕ್ಯೂಆರ್ ಕೋಡ್‌ಗೆ ವರ್ಗಾಯಿಸಿದ್ದಾರೆ. ಆದರೆ ಹಣ ವರ್ಗಾವಣೆಯಾದ ನಂತರ ಅಸಲು ಅಥವಾ ಲಾಭಾಂಶ ಯಾವುದನ್ನೂ ನೀಡದೆ ವಂಚಕರು ಸಂಪರ್ಕ ಕಡಿದುಕೊಂಡಿದ್ದಾರೆ. ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ಸಂತ್ರಸ್ತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ (CEN Police Station) ದೂರು ದಾಖಲಿಸಿದ್ದಾರೆ.






