ಲಕ್ನೋ: ಹೆದ್ದಾರಿಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಅಳವಡಿಸಲಾದ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು (ATMS) ದುರ್ಬಳಕೆ ಮಾಡಿಕೊಂಡು, ಕಾರುಗಳಲ್ಲಿರುವ ಜೋಡಿಗಳ ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಹಣ ಸುಲಿಗೆ ಮಾಡುತ್ತಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯ ಹಲಿಯಾಪುರ ಟೋಲ್ ಪ್ಲಾಜಾ ಮ್ಯಾನೇಜರ್ ಅಶುತೋಷ್ ಸರ್ಕಾರ್ ಎಂಬಾತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಕೆಲವು ದಿನಗಳ ಹಿಂದೆ ಜೋಡಿಯೊಂದರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಸುಲ್ತಾನ್‌ಪುರ ಜಿಲ್ಲೆಯ ಹಲಿಯಾಪುರ ಟೋಲ್ ಪ್ಲಾಜಾ ಬಳಿ ಕಾರು ನಿಲ್ಲಿಸಿ ಏಕಾಂತದಲ್ಲಿದ್ದಾಗ, ಮ್ಯಾನೇಜರ್ ಆ ದೃಶ್ಯಗಳನ್ನು ಸಿಸಿಟಿವಿ ಮೂಲಕ ಸೆರೆಹಿಡಿದಿದ್ದಾನೆ. ನಂತರ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಆ ಜೋಡಿಯಿಂದ ಬರೋಬ್ಬರಿ 32,000 ರೂ. ಹಣ ಸುಲಿಗೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಅಶುತೋಷ್ ಕೇವಲ ಪ್ರೇಮಿಗಳನ್ನಷ್ಟೇ ಅಲ್ಲ, ಟೋಲ್ ಪ್ಲಾಜಾ ಸುತ್ತಮುತ್ತ ಬಯಲು ಶೌಚಕ್ಕೆ ತೆರಳುತ್ತಿದ್ದ ಮಹಿಳೆಯರ ವಿಡಿಯೋವನ್ನೂ ಚಿತ್ರೀಕರಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇನ್ನೊಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬರಿಗೆ ಅವರ ಪತ್ನಿಯೊಟ್ಟಿಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿ 10,000 ರೂ. ವಸೂಲಿ ಮಾಡಿದ್ದಾನೆ. ವಿಚಿತ್ರವೆಂದರೆ, ಲಂಚ ಪಡೆಯುತ್ತಿದ್ದ ಪೊಲೀಸ್ ತಂಡವೊಂದರ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಈತ, ಅವರಿಂದಲೂ 2,000 ರೂ. ಕಸಿದುಕೊಂಡಿದ್ದನಂತೆ. ಸದ್ಯ ಈತನ ವಿರುದ್ಧ ತನಿಖೆ ಚುರುಕುಗೊಂಡಿದೆ.






