ಬೆಂಗಳೂರು: ತಮ್ಮ ಕ್ರೀಡಾಸ್ಫೂರ್ತಿ, ಸಜ್ಜನಿಕೆ ಹಾಗೂ ಅದ್ಭುತ ಸಾಧನೆಗಳ ಮೂಲಕ ಅಪಾರ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿರುವ ಹೆಮ್ಮೆಯ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಅವರು ಇದೀಗ ಕರ್ನಾಟಕ ಕ್ರಿಕೆಟ್ ಆಡಳಿತದ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮೈದಾನದಲ್ಲಿ ತಮ್ಮ ಶಿಸ್ತು ಮತ್ತು ಬೌಲಿಂಗ್ ಮೂಲಕ ಹೆಸರುವಾಸಿಯಾಗಿದ್ದ ಪ್ರಸಾದ್, ಈಗ ಆಡಳಿತಾತ್ಮಕವಾಗಿ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.
ಈ ಶುಭ ಸಂದರ್ಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಅವರು ವೆಂಕಟೇಶ ಪ್ರಸಾದ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
“ವೆಂಕಟೇಶ ಪ್ರಸಾದ್ ಅವರ ನೂತನ ಅಧಿಕಾರಾವಧಿಯಲ್ಲಿ ಸಂಸ್ಥೆಯು ಅಭೂತಪೂರ್ವವಾದ ಕಾರ್ಯಗಳನ್ನು ಸಾಧಿಸಲಿ ಮತ್ತು ಕರ್ನಾಟಕದ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಸ್ವಾಮೀಜಿ ಆಶೀರ್ವದಿಸಿ ಹಾರೈಸಿದ್ದಾರೆ.
ಕ್ರಿಕೆಟ್ ಆಡಳಿತಕ್ಕೆ ಸಜ್ಜನ ವ್ಯಕ್ತಿತ್ವದ ವೆಂಕಟೇಶ ಪ್ರಸಾದ್ ಅವರ ಆಗಮನವು ಕ್ರೀಡಾ ವಲಯದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.






