ಕ್ಯಾನ್‌ಬೆರಾ: ವಿಶ್ವದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಸರ್ಕಾರ ಐತಿಹಾಸಿಕ ನಿರ್ಧಾರವೊಂದನ್ನು ಜಾರಿಗೆ ತಂದಿದೆ. ಬುಧವಾರದಿಂದ (ಡಿಸೆಂಬರ್ 10) ಜಾರಿಗೆ ಬರುವಂತೆ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಟಿಕ್‌ಟಾಕ್ (TikTok), ಯೂಟ್ಯೂಬ್ (YouTube), ಇನ್ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ (Facebook) ಸೇರಿದಂತೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳು ಹದಿಹರೆಯದವರಿಗೆ ತಮ್ಮ ಕಂಟೆಂಟ್ ಅನ್ನು ನಿರ್ಬಂಧಿಸಲು ಆದೇಶಿಸಲಾಗಿದೆ.
ಈ ಬಗ್ಗೆ ವಿಡಿಯೋ ಸಂದೇಶದ ಮೂಲಕ ಸಂತಸ ಹಂಚಿಕೊಂಡಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, “ಇದು ನಮ್ಮ ದೇಶಕ್ಕೆ ಹೆಮ್ಮೆಯ ದಿನ. ಪೋಷಕರು ತಮ್ಮ ಮಕ್ಕಳ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯುತ್ತಿರುವ ದಿನವಿದು. ಬಿಗ್ ಟೆಕ್ ಕಂಪನಿಗಳ ಹಿಡಿತದಿಂದ ತಪ್ಪಿಸಿ, ಮಕ್ಕಳು ಮಕ್ಕಳಾಗಿಯೇ ಬೆಳೆಯಲು ಮತ್ತು ಪೋಷಕರು ನೆಮ್ಮದಿಯಿಂದಿರಲು ಈ ನಿರ್ಧಾರ ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ. ಈ ಕಾನೂನು ಆನ್‌ಲೈನ್ ಅಪಾಯಗಳನ್ನು ತಡೆಯಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿರುವ ಈ ಹೊಸ ನಿಯಮದ ಪ್ರಕಾರ, ಸುಮಾರು 10 ಪ್ರಮುಖ ಸಾಮಾಜಿಕ ಜಾಲತಾಣಗಳು ಮಕ್ಕಳ ಖಾತೆಗಳನ್ನು ನಿರ್ಬಂಧಿಸಬೇಕಿದೆ. ಒಂದು ವೇಳೆ ಕಂಪನಿಗಳು ಈ ನಿಯಮವನ್ನು ಪಾಲಿಸಲು ವಿಫಲವಾದರೆ ಬರೋಬ್ಬರಿ 33 ಮಿಲಿಯನ್ ಡಾಲರ್‌ವರೆಗೂ (ಸುಮಾರು 270 ಕೋಟಿ ರೂ.) ದಂಡ ತೆರಬೇಕಾಗುತ್ತದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ (ಹಿಂದಿನ ಟ್ವಿಟರ್) ಕೂಡ ಕೊನೆಯ ಗಳಿಗೆಯವರೆಗೂ ವಿರೋಧ ವ್ಯಕ್ತಪಡಿಸಿ, ಅಂತಿಮವಾಗಿ ಕಾನೂನಿಗೆ ತಲೆಬಾಗಿ ಬುಧವಾರದಿಂದಲೇ ಮಕ್ಕಳ ಕಂಟೆಂಟ್ ನಿರ್ಬಂಧಿಸುವುದಾಗಿ ಘೋಷಿಸಿದೆ.
ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಜಾಲತಾಣಗಳು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಅಲ್ಬನೀಸ್ ಸರ್ಕಾರ ಈ ಕಠಿಣ ಕ್ರಮವನ್ನು ಕೈಗೊಂಡಿದೆ. ತಪ್ಪು ಮಾಹಿತಿ ಹರಡುವಿಕೆ, ಸೈಬರ್ ಬೆದರಿಕೆ (Bullying) ಮತ್ತು ದೈಹಿಕ ಸೌಂದರ್ಯದ ಬಗೆಗಿನ ಕೀಳರಿಮೆಗಳಂತಹ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಟೆಕ್ ಕಂಪನಿಗಳು ಈ ನಡೆಯನ್ನು ವಿರೋಧಿಸಿದ್ದರೂ, ಪೋಷಕರು ಮತ್ತು ಶಿಕ್ಷಣ ತಜ್ಞರಿಂದ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ನಿಷೇಧ ಜಾರಿಯಾಗುವ ಕೆಲವೇ ಗಂಟೆಗಳ ಮುನ್ನ, ಸಾವಿರಾರು ಮಕ್ಕಳು ತಮ್ಮ ಫಾಲೋವರ್ಸ್‌ಗೆ ‘ಗುಡ್ ಬೈ’ ಸಂದೇಶಗಳನ್ನು ಪೋಸ್ಟ್ ಮಾಡಿದ್ದು ಕಂಡುಬಂತು. ಕಂಪನಿಗಳು ಈಗ ಬಳಕೆದಾರರ ವಯಸ್ಸನ್ನು ಪತ್ತೆಹಚ್ಚಲು ಸೆಲ್ಫಿ ಪರಿಶೀಲನೆ, ದಾಖಲೆಗಳ ಅಪ್‌ಲೋಡ್ ಮತ್ತು ವರ್ತನೆಯ ಆಧಾರದ ಮೇಲೆ ವಯಸ್ಸನ್ನು ಅಂದಾಜಿಸುವ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ.






