ನವದೆಹಲಿ: ಭಾರತದ ಹೆಮ್ಮೆಯ ಬೆಳಕಿನ ಹಬ್ಬವಾದ ದೀಪಾವಳಿಯು ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಮನ್ನಣೆಯನ್ನು ಪಡೆದುಕೊಂಡಿದೆ. ಈ ಸುದ್ದಿಯು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇರುವ ಭಾರತೀಯರಲ್ಲಿ ಮತ್ತು ಸಂಸ್ಕೃತಿ ಪ್ರೇಮಿಗಳಲ್ಲಿ ತೀವ್ರ ಹರ್ಷವನ್ನು ಮೂಡಿಸಿದೆ.
ನಮಗೆ ದೀಪಾವಳಿ ಎಂದರೆ ಕೇವಲ ಹಬ್ಬವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ನೀತಿಗಳೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಭಾವನೆ. ಇದು ನಮ್ಮ ಸನಾತನ ನಾಗರಿಕತೆಯ ಆತ್ಮವೇ ಸರಿ. ದೀಪಾವಳಿಯು ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ಮತ್ತು ಧರ್ಮದ ಮಾರ್ಗವನ್ನು ಪ್ರತಿನಿಧಿಸುತ್ತದೆ ಎಂದು ಬಣ್ಣಿಸಲಾಗಿದೆ.
ಯುನೆಸ್ಕೋದ ಪ್ರತಿಷ್ಠಿತ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯ ಪಟ್ಟಿಗೆ (Intangible Cultural Heritage List) ದೀಪಾವಳಿಯನ್ನು ಸೇರ್ಪಡೆಗೊಳಿಸಿರುವುದು ಈ ಹಬ್ಬದ ಜಾಗತಿಕ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ನಿರ್ಧಾರವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಟ್ವಿಟರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
“ಪ್ರಭು ಶ್ರೀರಾಮಚಂದ್ರನ ಆದರ್ಶಗಳು ಮತ್ತು ಮೌಲ್ಯಗಳು ನಮ್ಮನ್ನು ಹಾಗೂ ಇಡೀ ಮಾನವಕುಲವನ್ನು ಶಾಶ್ವತವಾಗಿ ಸರಿದಾರಿಯಲ್ಲಿ ಮುನ್ನಡೆಸಲಿ ಎಂಬ ಆಶಯದೊಂದಿಗೆ ಈ ಐತಿಹಾಸಿಕ ಕ್ಷಣವನ್ನು ಎಲ್ಲೆಡೆ ಸಂಭ್ರಮಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
https://x.com/narendramodi/status/1998642499200643262






