ನವದೆಹಲಿ: ಗೋವಾದ ಅರ್ಪೋರಾದಲ್ಲಿರುವ ‘ಬರ್ಚ್ ಬೈ ರೋಮಿಯೋ ಲೇನ್’ (Birch by Romeo Lane) ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ, ಕ್ಲಬ್ ಮಾಲೀಕನ ಪಾಲುದಾರ ಅಜಯ್ ಗುಪ್ತನನ್ನು ದೆಹಲಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಾಹನದಿಂದ ಇಳಿಯುತ್ತಿದ್ದಂತೆ ಮುತ್ತಿಗೆ ಹಾಕಿದ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಆತ, “ನಾನೊಬ್ಬ ಪಾಲುದಾರ (Partner) ಅಷ್ಟೇ, ನನಗೇನೂ ತಿಳಿದಿಲ್ಲ” ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.
ದೆಹಲಿಯಲ್ಲಿ ಅಜಯ್ ಗುಪ್ತನನ್ನು ವಶಕ್ಕೆ ಪಡೆಯುತ್ತಿದ್ದಂತೆ, ಅಗ್ನಿ ದುರಂತ, ಕ್ಲಬ್‌ನಲ್ಲಿದ್ದ ಸುರಕ್ಷತಾ ಲೋಪಗಳು ಮತ್ತು ತಲೆಮರೆಸಿಕೊಂಡಿರುವ ಮಾಲೀಕರ ಬಗ್ಗೆ ಮಾಧ್ಯಮದವರು ಪ್ರಶ್ನೆಗಳ ಸುರಿಮಳೆಗೈದರು. ಆದರೆ, ಈತ ತಾನು ಕೇವಲ ಬಿಸಿನೆಸ್ ಪಾರ್ಟ್ನರ್ ಆಗಿದ್ದು, ನಿರ್ವಹಣೆಯ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಈತನ ವಿರುದ್ಧ ಈಗಾಗಲೇ ಲುಕ್ ಔಟ್ ಸರ್ಕ್ಯುಲರ್ (LOC) ಜಾರಿ ಮಾಡಲಾಗಿತ್ತು. ಸದ್ಯ ಈತನನ್ನು ಹೆಚ್ಚಿನ ವಿಚಾರಣೆಗಾಗಿ ಗೋವಾಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ (ಡಿ.6-7) ನಡುರಾತ್ರಿ ಗೋವಾದ ಅರ್ಪೋರಾದಲ್ಲಿರುವ ಪ್ರಸಿದ್ಧ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 5 ಮಂದಿ ಪ್ರವಾಸಿಗರು ಸೇರಿದಂತೆ ಒಟ್ಟು 25 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕ್ಲಬ್‌ನ ಮುಖ್ಯ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಇಂಡಿಗೋ ವಿಮಾನದ ಮೂಲಕ ಥೈಲ್ಯಾಂಡ್‌ನ ಫುಕೆಟ್‌ಗೆ ಪರಾರಿಯಾಗಿದ್ದಾರೆ.
ತಲೆಮರೆಸಿಕೊಂಡಿರುವ ಮುಖ್ಯ ಆರೋಪಿಗಳಾದ ಲೂತ್ರಾ ಸಹೋದರರ ವಿರುದ್ಧ ಇಂಟರ್‌ಪೋಲ್ ‘ಬ್ಲೂ ಕಾರ್ನರ್ ನೋಟಿಸ್’ (Blue Corner Notice) ಜಾರಿ ಮಾಡಲಾಗಿದೆ. 25 ಜನರ ಸಾವಿಗೆ ಕಾರಣವಾದ ಈ ದುರಂತದಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದು, ತನಿಖೆ ಚುರುಕುಗೊಂಡಿದೆ.






