ಬೆಂಗಳೂರು: ಪ್ರಸಿದ್ಧ ಕನ್ನಡ ಚಲನಚಿತ್ರ ‘ಸಲಗ’ದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ (K.P. Srikanth) ಅವರಿಗೆ ಕೋಟಿಗಟ್ಟಲೆ ವಂಚನೆಯಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ SPM ಆರ್ಟ್ಸ್ ಸಂಸ್ಥೆಯ ಸಂಜಯ್ ಲಾಲ್ವಾನಿ (Sanjay Lalwani) ವಿರುದ್ಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
SPM ಆರ್ಟ್ಸ್ ಸಂಸ್ಥೆಯ ಸಂಜಯ್ ಲಾಲ್ವಾನಿ ಅವರು ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡುತ್ತಾರೆ. ಹೀಗಾಗಲೇ ದರ್ಶನ್ ಅವರ ‘ಯಜಮಾನ’, ತಮಿಳಿನ ‘ಜಿಗರ್ ಥಂಡಾ’ ಸೇರಿದಂತೆ ಹಲವು ಸಿನಿಮಾಗಳನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಲಾಲ್ವಾನಿ ಅವರು ಶ್ರೀಕಾಂತ್‌ರಿಂದ ‘ಸಲಗ’ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು (Dubbing Rights) ಖರೀದಿಸಿದ್ದರು. ಈ ಡೀಲ್ ₹2.35 ಕೋಟಿ ರೂಪಾಯಿಗೆ ಅಂತಿಮವಾಗಿತ್ತು.
ಡೀಲ್ ಫೈನಲ್ ಆದ ಬಳಿಕ, ಸಂಜಯ್ ಲಾಲ್ವಾನಿ ಅವರು ಕೇವಲ ₹38.50 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿ ಚಿತ್ರದ ಹಕ್ಕುಗಳನ್ನು ಪಡೆದಿದ್ದಾರೆ. ಆದರೆ, ಉಳಿದ ಬಾಕಿ ಹಣವನ್ನು ನೀಡದೆ ವಂಚನೆ ಮಾಡಿದ್ದಾರೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ.
ನಿರ್ಮಾಪಕ ಮತ್ತು ವಿತರಕರಾದ ಬೆಂಗಳೂರು ಕುಮಾರ್ ಅವರ ಮೂಲಕ ಶ್ರೀಕಾಂತ್ ಅವರಿಗೆ SPM ಆರ್ಟ್ಸ್ ಸಂಸ್ಥೆಯ ಸಂಜಯ್ ಲಾಲ್ವಾನಿ ಪರಿಚಯವಾಗಿದ್ದರು. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನೀಡಿದ ದೂರಿನನ್ವಯ ಜೀವನ್ ಭೀಮಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.






