ಉಡುಪಿ: ಕರಾವಳಿಯ ಭದ್ರತೆಗೆ ಸವಾಲಾಗಿದ್ದ ಅಕ್ರಮ ವಲಸಿಗರ ಪ್ರಕರಣವೊಂದರಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದು ಮಲ್ಪೆಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಹಕೀಮ್ ಅಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ., ಕರೀಮ್, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ರಿಮೂಲ್, ಮೊಹಮ್ಮದ್ ಇಮಾಮ್ ಶೇಖ್ ಮತ್ತು ಮೊಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಘಟನೆಯ ಹಿನ್ನೆಲೆ: 2024ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಅವರ ನೇತೃತ್ವದ ಪೊಲೀಸ್ ತಂಡವು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿತ್ತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರು ಬಾಂಗ್ಲಾದೇಶದ ಪ್ರಜೆಗಳೆಂಬ ಸ್ಫೋಟದ ಮಾಹಿತಿ ಹೊರಬಿದ್ದಿತ್ತು. ತನಿಖೆ ಮುಂದುವರಿದಂತೆ, ಇವರು ಅಗರ್ತಲಾದಿಂದ ಪಶ್ಚಿಮ ಬಂಗಾಳ ಮತ್ತು ಚೆನ್ನೈ ಮಾರ್ಗವಾಗಿ ಉಡುಪಿಗೆ ಬಂದಿದ್ದರು ಎಂಬುದು ತಿಳಿದುಬಂದಿತ್ತು. ಉಸ್ಮಾನ್ ಎಂಬ ಏಜೆಂಟ್ ಮೂಲಕ ಇಲ್ಲಿಗೆ ಬಂದು, ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಒಟ್ಟು 10 ಮಂದಿಯನ್ನು ಬಂಧಿಸಲಾಗಿತ್ತು.
ನಕಲಿ ದಾಖಲೆಗಳೊಂದಿಗೆ ಸಮಾಜದಲ್ಲಿ ಬೆರೆತುಹೋಗಿದ್ದ ಅಕ್ರಮ ನುಸುಳುಕೋರರನ್ನು ಪತ್ತೆಹಚ್ಚುವಲ್ಲಿ ಮಲ್ಪೆ ಪೊಲೀಸರು ತೋರಿದ ದಕ್ಷತೆ ಇಂದು ಶಿಕ್ಷೆಯ ರೂಪದಲ್ಲಿ ಫಲ ನೀಡಿದೆ. ಅಂದಿನ ಎಸ್.ಪಿ ಡಾ. ಅರುಣಕುಮಾರ್, ಅಡಿಷನಲ್ ಎಸ್.ಪಿ ಸಿದ್ದಲಿಂಗಪ್ಪ, ಡಿವೈಎಸ್‌ಪಿ ಪ್ರಭು ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಎಚ್ಚರಿಕೆಯ ಗಂಟೆ: ಅಕ್ರಮ ವಲಸಿಗರು ಕೇವಲ ಉದ್ಯೋಗವನ್ನು ಕಸಿದುಕೊಳ್ಳುವುದಲ್ಲದೆ, ದೇಶದ ಭದ್ರತೆ ಮತ್ತು ಸಂಸ್ಕೃತಿಗೂ ಧಕ್ಕೆ ತರುತ್ತಾರೆ ಎಂಬ ಆತಂಕದ ನಡುವೆ ಈ ತೀರ್ಪು ಮಹತ್ವದ್ದಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಮತ್ತು ತೆರಿಗೆ ಹಣದ ಸೌಲಭ್ಯಗಳನ್ನು ಅಕ್ರಮವಾಗಿ ಪಡೆಯುವ ಇಂತಹ ಜಾಲಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ರಾಜಕೀಯ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಕಾರವಿದ್ದರೆ, ದಕ್ಷ ಅಧಿಕಾರಿಗಳು ರಾಜ್ಯದಾದ್ಯಂತ ಇರುವ ಇಂತಹ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಕಾನೂನಿನ ಚೌಕಟ್ಟಿಗೆ ತರಬಲ್ಲರು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.






