ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 2023 ರಲ್ಲಿ ಅಧಿಕಾರ ವಹಿಸಿಕೊಂಡ ನಂತರದಿಂದ 2025ರ ನವೆಂಬರ್ ತಿಂಗಳವರೆಗೆ ಹೆಲಿಕಾಪ್ಟರ್ (Helicopter) ಮತ್ತು ವಿಶೇಷ ವಿಮಾನಗಳ (Special Flight) ಬಳಕೆಗೆ ಸರ್ಕಾರವು ಬರೋಬ್ಬರಿ 47 ಕೋಟಿಗೂ ಹೆಚ್ಚು (47,38,24,347 ರೂ.) ಹಣವನ್ನು ಖರ್ಚು ಮಾಡಿದೆ.
2023ರ ಮೇ ತಿಂಗಳಿನಿಂದ 2025ರ ನವೆಂಬರ್ ತಿಂಗಳವರೆಗೆ ಮುಖ್ಯಮಂತ್ರಿಗಳ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣಕ್ಕೆ ಆದ ಒಟ್ಟು ವೆಚ್ಚ ₹ 47,38,24,347 ಕೋಟಿ ರೂಪಾಯಿ. ವಿಧಾನ ಪರಿಷತ್‌ನಲ್ಲಿ ಎನ್. ರವಿಕುಮಾರ್ (N. Ravikumar) ಅವರು ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಸರ್ಕಾರ ಈ ಉತ್ತರವನ್ನು ಒದಗಿಸಿದೆ.
ಸಿಎಂ ಅವರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಲು ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನಗಳನ್ನು ಬಳಸಿದ್ದಾರೆ. ಅಲ್ಲದೆ, ದೆಹಲಿ (Delhi), ಹೈದರಾಬಾದ್ (Hyderabad), ಚೆನ್ನೈ (Chennai) ಸೇರಿದಂತೆ ವಿವಿಧ ನಗರಗಳಿಗೂ ಓಡಾಟ ನಡೆಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಸ್ವಂತ ಜಿಲ್ಲೆಯಾದ ಮೈಸೂರಿಗೆ (Mysore) ಭೇಟಿ ನೀಡಲು ಬರೋಬ್ಬರಿ ₹ 5 ಕೋಟಿಗೂ ಹೆಚ್ಚು ಹಣವನ್ನು ಪ್ರಯಾಣಕ್ಕಾಗಿ ಬಳಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸಿಎಂ ಓಡಾಟಕ್ಕಾಗಿ ಸರ್ಕಾರದ ಬೊಕ್ಕಸದಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.






