ಬೆಂಗಳೂರು: ತಂತ್ರಜ್ಞಾನ ಆಧಾರಿತ ತುರ್ತು ಸ್ಪಂದನಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು (BCP), ಬನಶಂಕರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಕೇವಲ 11 ನಿಮಿಷಗಳಲ್ಲಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
‘ನಮ್ಮ 112’ (Namma 112) ತುರ್ತು ಸಹಾಯವಾಣಿಗೆ ಬಂದ ಕರೆಯೊಂದಕ್ಕೆ ತಕ್ಷಣ ಸ್ಪಂದಿಸಿದ ಬನಶಂಕರಿ ಪೊಲೀಸ್ ಠಾಣೆಯ ಹೊಯ್ಸಳ ಗಸ್ತು ಸಿಬ್ಬಂದಿ, ಸ್ಥಳಕ್ಕೆ ದೌಡಾಯಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಈ ಘಟನೆಯು ‘ಬೆಂಗಳೂರು ಸೇಫ್ ಸಿಟಿ ಯೋಜನೆ’ಯ ಅಡಿಯಲ್ಲಿ ಅಳವಡಿಸಿಕೊಂಡಿರುವ ತಾಂತ್ರಿಕ ಪೊಲೀಸ್ ವ್ಯವಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ.
ಮಂಗಳವಾರ ಬೆಳಿಗ್ಗೆ ಬನಶಂಕರಿ 2ನೇ ಹಂತದ ಕಾವೇರಿನಗರ ರಸ್ತೆಯ ಫುಟ್‌ಪಾತ್ ಮೇಲೆ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರೊಬ್ಬರು ಗಮನಿಸಿದ್ದಾರೆ. ಕೂಡಲೇ ಅವರು ನಗರದ ತುರ್ತು ಸಂಖ್ಯೆ ‘ನಮ್ಮ 112’ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕರೆ ಸ್ವೀಕರಿಸಿದ ಕಮಾಂಡ್ ಸೆಂಟರ್ ಸಿಬ್ಬಂದಿ, ಜಿಯೋಲೊಕೇಶನ್ (Geolocation) ತಂತ್ರಜ್ಞಾನವನ್ನು ಬಳಸಿ ಘಟನಾ ಸ್ಥಳಕ್ಕೆ ಹತ್ತಿರವಿದ್ದ ಹೊಯ್ಸಳ-148 ವಾಹನಕ್ಕೆ ಎಚ್ಚರಿಕೆ ರವಾನಿಸಿದ್ದಾರೆ. ಮಾಹಿತಿ ತಲುಪಿದ ತಕ್ಷಣವೇ ಬನಶಂಕರಿ ಠಾಣೆಯ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸಮಯ ವ್ಯರ್ಥ ಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ.
ಕೇವಲ 11 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ, ಪರಿಸ್ಥಿತಿಯನ್ನು ಅವಲೋಕಿಸಿ ವ್ಯಕ್ತಿಗೆ ಪ್ರಾಥಮಿಕ ಆರೈಕೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನಂತರ ಚೇತರಿಸಿಕೊಂಡ ವ್ಯಕ್ತಿಯನ್ನು ಅವರ ಕುಟುಂಬಸ್ಥರೊಂದಿಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಜಿಯೋಲೊಕೇಶನ್ ಆಧಾರಿತ ರವಾನೆ ವ್ಯವಸ್ಥೆ ಮತ್ತು ತ್ವರಿತ ಪ್ರತಿಕ್ರಿಯೆ ಪ್ರೋಟೋಕಾಲ್ಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸಿದೆ ಎಂದು ಬೆಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






