ಗೋಕರ್ಣ: ಪವಿತ್ರ ಯಾತ್ರಾಸ್ಥಳ ಕುಮಟಾ ತಾಲ್ಲೂಕಿನ ಗೋಕರ್ಣದ ಬಂಗ್ಲೆಗುಡ್ಡ ಪ್ರದೇಶದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಅದೃಷ್ಟವಶಾತ್, ಘಟನೆ ನಡೆದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಬೆಳಗಿನ ಜಾವ ಮನೆಯೊಂದರಿಂದ ದಟ್ಟವಾದ ಹೊಗೆ ಮತ್ತು ವಿಚಿತ್ರ ಶಬ್ದಗಳು ಕೇಳಿಬಂದಿವೆ. ಇದನ್ನು ಗಮನಿಸಿದ ಸ್ಥಳೀಯರು ಓಡಿಬರುವಷ್ಟರಲ್ಲೇ ಗ್ಯಾಸ್ ಸಿಲಿಂಡರ್ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಮನೆಯ ಮೇಲ್ಚಾವಣಿ ಹಾರಿಹೋಗಿದ್ದು, ಗೋಡೆಗಳು ಮತ್ತು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಅಗ್ನಿಗಾಹುತಿಯಾಗಿವೆ. ಸ್ಫೋಟದ ರಭಸಕ್ಕೆ ಸಿಡಿದ ಬೆಂಕಿಯ ಕಿಡಿಗಳು ಸಮೀಪದ ಅರಣ್ಯ ಪ್ರದೇಶಕ್ಕೂ ಹಬ್ಬಿದ್ದು, ಸ್ಥಳೀಯರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಕುಟುಂಬಸ್ಥರು ಬೆಳಿಗ್ಗೆಯೇ ಕೆಲಸದ ನಿಮಿತ್ತ ಹೊರಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ಒಂದು ವೇಳೆ ಮನೆಯಲ್ಲಿ ಜನರಿದ್ದಿದ್ದರೆ ಭಾರೀ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಕುಮಟಾದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸುಮಾರು ಒಂದು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅಲ್ಲದೆ, ಕಾಡಿಗೆ ಹಬ್ಬಿದ್ದ ಬೆಂಕಿಯನ್ನೂ ನಂದಿಸುವಲ್ಲಿ ಯಶಸ್ವಿಯಾದರು.
ಗೋಕರ್ಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಗ್ಯಾಸ್ ಲೀಕೇಜ್‌ನಿಂದಾಗಿ ಬೆಂಕಿ ಹೊತ್ತಿಕೊಂಡು, ನಂತರ ಸಿಲಿಂಡರ್ ಬಿಸಿಯಾಗಿ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.






