ಬೆಳಗಾವಿ: ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರ ವಿರುದ್ಧ ಗಂಭೀರ ಸ್ವರೂಪದ ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಸ್ವತಃ ಸುಪ್ರೀಂ ಕೋರ್ಟ್ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಹುಬ್ಬಳ್ಳಿಯ ಹೃದಯಭಾಗದಲ್ಲಿರುವ 15 ಗುಂಟೆ ಜಮೀನು ವಿವಾದ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕಾನೂನು ಸಚಿವರೇ ಕಾನೂನು ಉಲ್ಲಂಘಿಸಿದ ಆರೋಪಕ್ಕೆ ಸಿಲುಕಿರುವುದು ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ.
ಹುಬ್ಬಳ್ಳಿ ನಗರದ ಸ್ಟೇಷನ್ ರಸ್ತೆಯ ಪಿಂಟೂ ವೃತ್ತದ ಬಳಿಯಿರುವ ಬೆಲೆಬಾಳುವ 15 ಗುಂಟೆ ಜಮೀನು ವಿವಾದದ ಕೇಂದ್ರಬಿಂದುವಾಗಿದೆ. ಜಕ್ಕವ್ವ ಎಂಬ ಅಂಗವಿಕಲ ಮಹಿಳೆ ಈ ಜಾಗಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಕಳೆದ 60 ವರ್ಷಗಳಿಂದ ಒತ್ತುವರಿಯಾಗಿದ್ದ ಈ ಜಾಗವನ್ನು ಕೂಡಲೇ ಖಾಲಿ ಮಾಡಬೇಕೆಂದು ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ ಖಡಕ್ ತೀರ್ಪು ನೀಡಿದೆ. ಸಚಿವರ ಪರ ವಾದವನ್ನು ಕೇಳಿ ಗರಂ ಆದ ಪೀಠ, ಕಾನೂನು ಸಚಿವರೇ ಆಗಿದ್ದುಕೊಂಡು ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.
ಈ ಪ್ರಕರಣದ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸುರೇಶ್ ಕುಮಾರ್, ಎಚ್.ಕೆ.ಪಾಟೀಲ್ ವಿರುದ್ಧ ವ್ಯಂಗ್ಯದ ಮೂಲಕ ವಾಗ್ದಾಳಿ ನಡೆಸಿದ್ದಾರೆ. “ಹಿಂದೆ ನನ್ನ ವಿರುದ್ಧ ಆರೋಪ ಬಂದಾಗ ನಾನು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಜಿಸಿದ್ದೆ. ಆದರೆ, ಎಚ್.ಕೆ.ಪಾಟೀಲ್ ಅವರು ಬಹಳ ದೊಡ್ಡವರು, ಅವರ ಮುಂದೆ ನಾನು ಚಿಕ್ಕವನು” ಎಂದು ಹೇಳುವ ಮೂಲಕ, ಪಾಟೀಲರು ರಾಜೀನಾಮೆ ನೀಡಬೇಕೆಂದು ಪರೋಕ್ಷವಾಗಿ ಆಗ್ರಹಿಸಿದ್ದಾರೆ.
ಒಂದೆಡೆ ಸುಪ್ರೀಂ ಕೋರ್ಟ್‌ನ ಛೀಮಾರಿ, ಮತ್ತೊಂದೆಡೆ ವಿರೋಧ ಪಕ್ಷಗಳ ಟೀಕೆಗಳಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಕಾನೂನು ಪಾಲನೆ ಮಾಡಬೇಕಾದ ಸಚಿವರೇ ಭೂ ಕಬಳಿಕೆ ಆರೋಪ ಎದುರಿಸುತ್ತಿರುವುದು ಮತ್ತು ಬಡ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಬೇಕಾಗಿ ಬಂದ ಸ್ಥಿತಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.






