ಬೆಂಗಳೂರು: ಟೆಕ್ ಸಿಟಿಯಲ್ಲಿ ಆಟೋ ಚಾಲಕರ ಬಗ್ಗೆ ಅದೆಷ್ಟೋ ದೂರುಗಳು ಕೇಳಿಬರುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ರ‍್ಯಾಪಿಡೋ (Rapido) ಆಟೋ ಚಾಲಕ ತಮ್ಮ ಆಟೋದಲ್ಲಿ ಅಂಟಿಸಿದ ಪುಟ್ಟ ಸಂದೇಶದ ಮೂಲಕ ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಮನ ಗೆದ್ದಿದ್ದಾರೆ. ಮಧ್ಯರಾತ್ರಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಈ ಚಾಲಕನ ಕಾಳಜಿ ಸುರಕ್ಷತೆಯ ಭಾವನೆ ಮೂಡಿಸಿದ್ದು, ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಲಿಟಲ್ ಬೆಂಗಳೂರು ಸ್ಟೋರೀಸ್’ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮಹಿಳೆಯೊಬ್ಬರು ರಾತ್ರಿ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಆಟೋ ಚಾಲಕನ ಸೀಟಿನ ಹಿಂದೆ ಅಂಟಿಸಲಾದ ಬೋರ್ಡ್‌ನಲ್ಲಿ, “ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ನನಗೆ ಮುಖ್ಯ. ಆರಾಮಾಗಿ ಕುಳಿತುಕೊಳ್ಳಿ,” (I’m a father and brother too. Your safety matters. Sit back comfortably) ಎಂದು ಬರೆಯಲಾಗಿತ್ತು. ಈ ಸಾಲುಗಳನ್ನು ಓದಿದ ತಕ್ಷಣ ತಮಗೆ ನಿರಾಳ ಮತ್ತು ಸುರಕ್ಷಿತ ಭಾವನೆ ಮೂಡಿತು ಎಂದು ಪ್ರಯಾಣಿಕರು ಹಂಚಿಕೊಂಡಿದ್ದಾರೆ.
ಚಾಲಕನ ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದನ್ನು ಅನೇಕರು ‘ಪೀಕ್ ಬೆಂಗಳೂರು ಮೊಮೆಂಟ್’ ಎಂದು ಬಣ್ಣಿಸುತ್ತಿದ್ದಾರೆ. “ಆಟೋ ಅಣ್ಣನಿಗೆ ದೇವರು ಒಳ್ಳೆಯದು ಮಾಡಲಿ,” ಎಂದು ಹಲವರು ಹಾರೈಸಿದ್ದರೆ, ಇನ್ನು ಕೆಲವರು ಇಂತಹ ಘಟನೆಗಳು ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ನಗರ ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.






