ಶಿವಮೊಗ್ಗ: ಪ್ರೇಮಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಭೀಕರವಾಗಿ ಕೊ*ಲೆ ಮಾಡಿರುವ ಘಟನೆ, ಭದ್ರಾವತಿ ನಗರದ ಜೈ ಭೀಮ್ ನಗರದಲ್ಲಿ ನಡೆದಿದೆ.
ಕೊಲೆಯಾದವರನ್ನು ಕಿರಣ್ (25) ಮತ್ತು ಮಂಜುನಾಥ್ (65) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಶೃತಿ ಮತ್ತು ನಂದೀಶ್ ಎಂಬ ಪ್ರೇಮಿಗಳು ಪರಾರಿಯಾಗಿದ್ದರು. ಆದರೆ ನೆನ್ನೆ ಸಂಜೆ ಪ್ರೇಮಿಗಳಿಬ್ಬರೂ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ (Hale Nagara Police Station) ಹಾಜರಾಗಿ, ಈ ಸಂದರ್ಭದಲ್ಲಿ ಯುವತಿ ಶೃತಿ ತಾನು ಯುವಕ ನಂದೀಶ್ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾಳೆ.
ಇದರಿಂದ ಕೋಪಕೊಂಡ ಯುವತಿ ಸಹೋದರ ಮತ್ತು ಆತನ ಕಡೆಯವರು, ಪ್ರೇಮಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿದು ಕಿರಣ್ ಮತ್ತು ಮಂಜುನಾಥ್ ಅವರ ಮೇಲೆ ದೊಣ್ಣೆ ಮತ್ತು ಇತರೆ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಕಿರಣ್ ಮತ್ತು ಮಂಜುನಾಥ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆ ಸಂಬಂಧ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಕೊಲೆಗೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಿದ್ದಾರೆ. ಜೈ ಭೀಮ್ ನಗರದಲ್ಲಿ ಈ ಘಟನೆಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ.






