ಬೆಂಗಳೂರು: ಬ್ರಹ್ಮಾನಂದ ಗುರೂಜಿ (Brahmananda Guruji) ವಿರುದ್ಧ ಮಹಿಳೆಯೊಬ್ಬರು ಲೈಂ*ಗಿಕ ಕಿರುಕುಳ (Sexual Harassment) ಹಾಗೂ ಹಣಕಾಸಿನ ವಂಚನೆಯ ಗಂಭೀರ ಆರೋಪ ಮಾಡಿದ್ದಾರೆ. ಸೈಟ್ ಕೊಡಿಸುವ ನೆಪದಲ್ಲಿ ಗುರೂಜಿ ತಮ್ಮನ್ನು ಮಂಚಕ್ಕೆ ಆಹ್ವಾನಿಸಿದ್ದರು ಎಂದು ನೊಂದ ಮಹಿಳೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಈ ಹಿಂದೆ ಬ್ರಹ್ಮಾನಂದ ಗುರೂಜಿ ಮನೆ ಮುಂದೆ ಬಡ ದಂಪತಿಯೊಬ್ಬರು ವಾಸವಿದ್ದರು. ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಗುರೂಜಿ ಸಂತ್ರಸ್ಥೆಯನ್ನು ಪರಿಚಯಿಸಿದ್ದರು.
ರೂ. 13 ಲಕ್ಷದ ಸೈಟ್ ಅನ್ನು ರೂ. 12 ಲಕ್ಷಕ್ಕೆ ಕೊಡಿಸುವುದಾಗಿ ಗುರೂಜಿ ಮಾತುಕತೆ ನಡೆಸಿ, ದಂಪತಿಯ ಬಳಿ ಕೇವಲ ರೂ. 8 ಲಕ್ಷ ಇದೆ ಎಂದಾಗ, ತಾವು ರೂ. 5 ಲಕ್ಷ ಸಹಾಯ ಮಾಡುವುದಾಗಿ ಹೇಳಿ, ರೂ. 5 ಲಕ್ಷವನ್ನು ಬೇರೊಬ್ಬರಿಗೆ ಅಡ್ವಾನ್ಸ್ ನೀಡಿದ್ದರು.
ಹಣ ನೀಡಿ ಒಂದು ವರ್ಷ ಕಳೆದರೂ ಸೈಟ್ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ವಾಮೀಜಿ ಹಣ ಬೇಕಿದ್ದರೆ ಮಂಚಕ್ಕೆ ಬಾ,” ಎಂದು ಸ್ವಾಮೀಜಿ ಆಹ್ವಾನಿಸಿದ್ದಾರೆ ಮತ್ತು ವಿಡಿಯೋ ಕಾಲ್ (Video Call) ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಸ್ವಾಮೀಜಿಯ ವಿಡಿಯೋ ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಹೇಳಿರುವ ಮಹಿಳೆಯಿಂದ ವಿಡಿಯೋ ಡಿಲೀಟ್ ಮಾಡಲು ಸ್ವಾಮೀಜಿ ರೂ. 50 ಸಾವಿರ ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ರಹ್ಮಾನಂದ ಗುರೂಜಿ ಪ್ರತಿಕ್ರಿಯೆ:
ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಹ್ಮಾನಂದ ಗುರೂಜಿ, “ಸೈಟ್ ವಿಚಾರವಾಗಿ 2 ವರ್ಷದ ಹಿಂದೆ ಮಹಿಳೆ ಬಂದಿದ್ರು. ನಾನು ಸೈಟ್ ವ್ಯಾಪಾರ ಮಾಡಲ್ಲ ಅಂದ್ರೂ ಕೇಳಿಕೊಂಡಿದ್ರು. ಒಬ್ಬರ ಬಳಿ ಸೈಟ್ ಬಗ್ಗೆ ಮಾತನಾಡಿ ರೂ.5 ಲಕ್ಷ ಹಣ ಅಡ್ವಾನ್ಸ್ ನೀಡಲಾಗಿತ್ತು. ಇ-ಖಾತೆಗಳು ನಿಂತಿದ್ದ ಕಾರಣ ನೋಂದಣಿ ಆಗಿಲ್ಲ. ಬಳಿಕ ಆ ಹಣವನ್ನು ಮಹಿಳೆಗೆ ವಾಪಸ್ ಕೊಡಿಸಿದ್ದೆ. ಮಹಿಳೆಯ ಜತೆ ಸೇರಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ,” ಎಂದು ಆರೋಪಗಳನ್ನು ನಿರಾಕರಿಸಿದ್ದಾರೆ.






