ಮಡಿಕೇರಿ: ಫೇಸ್‌ಬುಕ್(Facebook) ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿ ಮಾಡಲು ಮಂಡ್ಯದಿಂದ ಮಡಿಕೇರಿಗೆ ಬಂದಿದ್ದ ಯುವಕನೊಬ್ಬ, ಇಲ್ಲಿನ ಮಂಗಳಾದೇವಿ ನಗರದ ಮನೆಯೊಂದರಲ್ಲಿ ಬಂಧಿಯಾಗಿದ್ದಲ್ಲದೆ, ಹಣಕ್ಕಾಗಿ ಹಲ್ಲೆಗೊಳಗಾಗಿರುವ ಗಂಭೀರ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್ (Mahadev) ಎಂಬ ಯುವಕ ಈ ಘಟನೆಯ ಬಲಿಪಶು. ಶುಕ್ರವಾರ ಸಂಜೆ ಮಹದೇವ್, ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಮಡಿಕೇರಿಗೆ ಬಂದಿದ್ದರು. ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದರಲ್ಲಿ ಒಂಟಿಯಾಗಿ ಬಂದಿದ್ದ ಮಹದೇವ್‌ನನ್ನು ಮೂವರು ವ್ಯಕ್ತಿಗಳು ಕೂಡಿ ಹಾಕಿದ್ದಾರೆ. ರಾತ್ರಿಯಿಡೀ ಮಹದೇವ್ ಮೇಲೆ ಹಲ್ಲೆ ನಡೆಸಿ, ಹಣಕ್ಕಾಗಿ ಬೇಡಿಕೆ (Assault for Money) ಇಟ್ಟಿದ್ದಾರೆ.
ಮಹದೇವ್ ಹೇಗೋ ಆ ಮೂವರಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮಹದೇವ್‌ನನ್ನು ಬೆನ್ನಟ್ಟಿದ ಆರೋಪಿಗಳು, ಆಟೋದಲ್ಲಿ ಮಹದೇವ್‌ನನ್ನು ಅಪಹರಣ ಮಾಡಲು ಯತ್ನಿಸಿದ್ದಾರೆ. ಈ ಅಪಹರಣ ಯತ್ನದ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೂವರಿಂದ ಹೇಗೋ ತಪ್ಪಿಸಿಕೊಂಡ ಮಹದೇವ್ ತಕ್ಷಣವೇ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.






