Home State Politics National More
STATE NEWS

Naval Baseನ ವಜ್ರಕೋಶ ಬಳಿ ಭೂಮಿ ಕಂಪಿಸಿದ ಅನುಭವ: ಸ್ಫೋಟದ ಸದ್ದಿನ ಅಸಲಿಯತ್ತು ಬಿಚ್ಚಿಟ್ಟ ನೌಕಾಪಡೆ!

Karwar naval base explosion sound clarification indian navy routine activity
Posted By: Sagaradventure
Updated on: Dec 13, 2025 | 10:48 AM

ಕಾರವಾರ(ಉತ್ತರಕನ್ನಡ): ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದ ಸಮೀಪದ ನೌಕಾನೆಲೆಯ `ವಜ್ರಕೋಶ’ ಬಳಿ ಭಾರಿ ಸ್ಫೋಟದ ಸದ್ದು ಮತ್ತು ಕಂಪನ ಉಂಟಾಗಿದೆ ಎಂಬ ಮಾಧ್ಯಮ ವರದಿಗಳಿಗೆ ಭಾರತೀಯ ನೌಕಾಪಡೆ ಸ್ಪಷ್ಟನೆ ನೀಡಿದೆ. ಈ ಸದ್ದು ಮತ್ತು ಕಂಪನವು ನೌಕಾ ಶಸ್ತ್ರಾಸ್ತ್ರ ಡಿಪೋದಲ್ಲಿ (NAD) ನಡೆದ ವಾಡಿಕೆಯ ಶಸ್ತ್ರಾಸ್ತ್ರಗಳ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯಿಂದ (Routine Demolition Activity) ಉಂಟಾಗಿದೆಯೇ ಹೊರತು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ನೌಕಾಪಡೆ ಸ್ಪಷ್ಟಪಡಿಸಿದೆ.

ಈ ಚಟುವಟಿಕೆಯನ್ನು ಅತ್ಯಂತ ನಿಯಂತ್ರಿತ ವಾತಾವರಣದಲ್ಲಿ, ವಿಷಯ ತಜ್ಞರ ಸಮ್ಮುಖದಲ್ಲಿ ಮತ್ತು ನಿಗದಿಪಡಿಸಿದ ಸುರಕ್ಷತಾ ಶಿಷ್ಟಾಚಾರಗಳನ್ನು (Safety Protocols) ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಡೆಸಲಾಗಿದೆ. ಈ ಪ್ರಕ್ರಿಯೆಯು ಸಂಪೂರ್ಣ ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ.

ಆದರೂ, ಸ್ಫೋಟದ ಸದ್ದಿನಿಂದ ಸ್ಥಳೀಯ ನಿವಾಸಿಗಳಲ್ಲಿ ಉಂಟಾಗಿರುವ ಆತಂಕವನ್ನು ನೌಕಾಪಡೆ ಗಂಭೀರವಾಗಿ ಪರಿಗಣಿಸಿದೆ. ಜನರ ಕಾಳಜಿಗೆ ಸ್ಪಂದಿಸಲು ಮತ್ತು ಅವರ ಭಯ ನಿವಾರಿಸಲು ನೌಕಾ ಅಧಿಕಾರಿಗಳು ಜಿಲ್ಲಾ ಆಡಳಿತದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಥಳೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಭಾರತೀಯ ನೌಕಾಪಡೆ ಸದಾ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡಲಾಗಿದೆ.

ಶುಕ್ರವಾರ ಅಂಕೋಲಾ ತಾಲೂಕಿನ ಅಲಗೇರಿ ಸಮೀಪದ ನೌಕಾನೆಲೆಯ ‘ವಜ್ರಕೋಶ’ ವಲಯದಲ್ಲಿ ಭಾರೀ ಸ್ಫೋಟ ಸಂಭವಿಸಿದ ಸದ್ದು ಕೇಳಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಸ್ಫೋಟದ ತೀವ್ರತೆಗೆ ಆಕಾಶದ ಎತ್ತರಕ್ಕೆ ದಟ್ಟ ಹೊಗೆ ಚಿಮ್ಮಿದ್ದು, ಸುತ್ತಮುತ್ತಲಿನ ಪ್ರದೇಶಗಳು ನಡುಗಿದ ಅನುಭವವಾಗಿತ್ತು. ಪರಿಣಾಮ ಸಮೀಪದ ಮೂರಕ್ಕೂ ಹೆಚ್ಚು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸ್ಥಳೀಯರ ಆತಂಕಕ್ಕೂ ಕಾರಣವಾಗಿತ್ತು.

Shorts Shorts