ಚಿಕ್ಕಬಳ್ಳಾಪುರ: ಹೆಚ್ಚು ಹಣ ಗಳಿಸುವ ಆಸೆಯಿಂದ ಆನ್‌ಲೈನ್ ಗೇಮ್‌ಗಳ (Online Game) ಮೊರೆ ಹೋಗಿ, ವಿಪರೀತ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ಮೀಟರ್ ಬಡ್ಡಿ (Meter Baddi) ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ದುರಂತ ಚಿಂತಾಮಣಿ (Chintamani) ನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಯುವರಾಜ್ (25) ಎಂದು ಗುರುತಿಸಲಾಗಿದೆ. ಈತ ಚಿಂತಾಮಣಿ ನಗರದ ಕೋಲಾರ ರಸ್ತೆಯಲ್ಲಿ ತನ್ನ ತಂದೆಯ ಬೀಡಾ ಅಂಗಡಿಯನ್ನು ನಡೆಸುತ್ತಿದ್ದ. ಆರು ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎರಡು ತಿಂಗಳಿಂದ ತಂದೆಯ ಅನಾರೋಗ್ಯದ ಕಾರಣದಿಂದ ಅಂಗಡಿ ಜವಾಬ್ದಾರಿ ವಹಿಸಿಕೊಂಡಿದ್ದ.
ಆನ್‌ಲೈನ್ ಗೇಮ್‌ಗಳಿಂದ ಹೆಚ್ಚು ಹಣ ಗಳಿಸುವ ದುರಾಸೆಗೆ ಬಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಹಿಂದೆ ಆತ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದಾಗ, ತಂದೆ ಅದನ್ನು ತೀರಿಸಿ, ಇನ್ನು ಮುಂದೆ ಹೀಗೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು.
ಆದರೆ, ಮತ್ತೆ ಸಾಲದ ಸುಳಿಗೆ ಸಿಲುಕಿ, ಸಾಲಗಾರರ ನಿರಂತರ ಕಿರುಕುಳವನ್ನು ತಾಳಲಾರದೆ ಚಿಂತಾಮಣಿ ನಗರದ ಹೊರವಲಯದ ಗೋಪಸಂದ್ರ ಗ್ರಾಮದಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ (Chintamani Rural Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






