ಪುರಿ: ಒಡಿಶಾದ ಪುರಿ ಜಗನ್ನಾಥ ದೇವಾಲಯವು ತನ್ನ ಪವಾಡಗಳು ಮತ್ತು ಬಗೆಹರಿಯದ ರಹಸ್ಯಗಳಿಗೆ ವಿಶ್ವದಾದ್ಯಂತ ಹೆಸರುವಾಸಿ. ಇದೀಗ ದೇವಾಲಯದ ಗೋಪುರದ ಮೇಲೆ ಹದ್ದುಗಳು ಹಾರಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಭಕ್ತರ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.
’ಭವಿಷ್ಯ ಮಲಿಕಾ’ದ ಎಚ್ಚರಿಕೆ ಗಂಟೆಯೇ?
ದೇವಾಲಯದ ಶಿಖರದ ಮೇಲಿರುವ ನೀಲಚಕ್ರ ಮತ್ತು ಪತಿತಪಾವನ ಧ್ವಜದ ಸುತ್ತ ಹದ್ದುಗಳು ಪ್ರದಕ್ಷಿಣೆ ಹಾಕುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಅನೇಕರು, ಶತಮಾನಗಳಷ್ಟು ಹಳೆಯದಾದ ‘ಭವಿಷ್ಯ ಮಲಿಕಾ’ (Bhavishya Malika) ಗ್ರಂಥದಲ್ಲಿ ಉಲ್ಲೇಖಿಸಲಾದ ಭವಿಷ್ಯವಾಣಿಯೊಂದಿಗೆ ತಳುಕು ಹಾಕುತ್ತಿದ್ದಾರೆ. ಇದು ಮುಂಬರುವ ವಿಪತ್ತು ಅಥವಾ ದೊಡ್ಡ ಬದಲಾವಣೆಯ ಮುನ್ಸೂಚನೆ ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದರೆ, ಇನ್ನು ಕೆಲವರು ಇದನ್ನು ದೈವಿಕ ಸಂಕೇತ ಎಂದು ನಂಬಿದ್ದಾರೆ.
ಗರುಡನ ದರ್ಶನವೋ? ಅಪಶಕುನವೋ?
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಮೊದಲ ಬಾರಿಗೆ ಸಂಭವಿಸುತ್ತಿಲ್ಲ. ಕಳೆದ ಕೆಲವು ದಿನಗಳಿಂದ ದೇವಾಲಯದ ಧ್ವಜದ ಬಳಿ ಹದ್ದುಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಜಗನ್ನಾಥನು ವಿಷ್ಣುವಿನ ಅವತಾರವಾಗಿರುವುದರಿಂದ, ವಿಷ್ಣುವಿನ ವಾಹನವಾದ ಗರುಡನು ಸ್ವಾಮಿಯ ದರ್ಶನಕ್ಕೆ ಬಂದಿರಬಹುದು ಎಂದು ಕೆಲ ಭಕ್ತರು ಭಾವಾವೇಶದಿಂದ ಹೇಳುತ್ತಿದ್ದಾರೆ. ಆದರೆ, ದೇವಾಲಯದ ಮೇಲ್ಭಾಗದಲ್ಲಿ ಹದ್ದು ಹಾರಾಡುವುದು ಶುಭ ಸೂಚನೆಯಲ್ಲ ಎಂಬ ಚರ್ಚೆಯೂ ಜೋರಾಗಿದೆ.
ಆಡಳಿತ ಮಂಡಳಿ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಾಲಯದ ಆಡಳಿತ ಮಂಡಳಿ, “ಇದು ಕೇವಲ ನೈಸರ್ಗಿಕ ಘಟನೆ. ಪಕ್ಷಿಗಳು ಆಕಾಶದಲ್ಲಿ ಹಾರಾಡುವುದು ಸಹಜ, ಇದಕ್ಕೆ ಪವಾಡದ ಲೇಪನ ಅಥವಾ ಭಯ ಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ. ಆದರೂ, ಭಕ್ತಿ ಮತ್ತು ನಂಬಿಕೆಯ ಜಗತ್ತಿನಲ್ಲಿ ಈ ದೃಶ್ಯ ಶತಮಾನಗಳ ಹಳೆಯ ‘ಶಕುನ’ಗಳ ಬಗೆಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.






