Home State Politics National More
STATE NEWS

Pakistan ವಿವಿಯಲ್ಲಿ ಸಂಸ್ಕೃತ ಕೋರ್ಸ್: ಪಾಕ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಮಹಾಭಾರತದ ಪರಿಚಯ!

Pakisthan sanskrit
Posted By: Meghana Gowda
Updated on: Dec 13, 2025 | 6:50 AM

ಇಸ್ಲಾಮಾಬಾದ್‌: 1947ರಲ್ಲಿ ದೇಶ ವಿಭಜನೆಯಾದ ನಂತರ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಗಳಿಗೆ ಸಂಸ್ಕೃತ (Sanskrit) ಕಲಿಸಲು ಪೂರ್ಣ ಪ್ರಮಾಣದ ಕೋರ್ಸ್ ಆರಂಭಿಸಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಈ ಕ್ರಮವನ್ನು ಭಾರತ ಮತ್ತು ಪಾಕಿಸ್ತಾನದ ಸಾಮಾನ್ಯ ಸಾಂಸ್ಕೃತಿಕ ಪರಂಪರೆಗೆ ಮರು-ಸಂಪರ್ಕ ಸಾಧಿಸುವ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಲಾಹೋರ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯ (Lahore University of Management Sciences – LUMS) ಈ ಮಹತ್ವದ ಕೋರ್ಸ್ ಅನ್ನು ಪ್ರಾರಂಭಿಸಿದೆ. ಇದು ನಾಲ್ಕು ಕ್ರೆಡಿಟ್ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳಿಗೆ ಭಗವದ್ಗೀತೆ (Bhagavad Gita) ಶ್ಲೋಕಗಳು ಮತ್ತು ಮಹಾಭಾರತದ (Mahabharata) ಪರಿಚಯವನ್ನು ಮಾಡಿಕೊಡುತ್ತದೆ.

ವಿಶ್ವವಿದ್ಯಾಲಯವು ಮೂರು ತಿಂಗಳ ಹಿಂದೆ ವಾರಾಂತ್ಯದಲ್ಲಿ ಸಂಸ್ಕೃತ ಕಾರ್ಯಾಗಾರವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಿಂದ ಮತ್ತು ವಿದ್ವಾಂಸರಿಂದ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಪೂರ್ಣ ಪ್ರಮಾಣದ ಕೋರ್ಸ್ ಆರಂಭಿಸಲಾಗಿದೆ.

ಪ್ರಾಚೀನ ದಾಖಲೆಗಳ ಸಂರಕ್ಷಣೆ:

ವಿಶ್ವವಿದ್ಯಾಲಯದ ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಕಾಸ್ಮಿ (Dr. Ali Usman Qasmi) ಅವರು ಪ್ರತಿಕ್ರಿಯಿಸಿ,  ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಂಸ್ಕೃತದ ಹಲವಾರು ಪ್ರಾಚೀನ ದಾಖಲೆಗಳು ಸಂರಕ್ಷಿಸಲ್ಪಟ್ಟಿವೆ. ವಿಭಜನೆಯ ನಂತರ ಇವುಗಳ ಬಗ್ಗೆ ಯಾರೂ ಸಂಶೋಧನೆ ಮಾಡಿಲ್ಲ. ವಿದೇಶಿ ಸಂಶೋಧಕರು ಮಾತ್ರ ಓದುತ್ತಿದ್ದರು. ಈಗ ಈ ದಾಖಲೆಗಳನ್ನು ಲಾಹೋರ್ ವಿಶ್ವವಿದ್ಯಾಲಯಕ್ಕೆ ತರಲಾಗುವುದು, ಎಂದು ತಿಳಿಸಿದ್ದಾರೆ.

ಈ ಕೋರ್ಸ್ ಮೂಲಕ ಪಾಕಿಸ್ತಾನದ ವಿದ್ಯಾರ್ಥಿಗಳು ತಮ್ಮ ಪ್ರದೇಶದ ಪುರಾತನ ಸಾಂಸ್ಕೃತಿಕ ಬೇರುಗಳ ಬಗ್ಗೆ ಅಧ್ಯಯನ ಮಾಡಲು ಅವಕಾಶ ಪಡೆದಿದ್ದಾರೆ.

Shorts Shorts