Home State Politics National More
STATE NEWS

ಐನಾತಿ Painter ಕೈಚಳಕ: 10 ಲಕ್ಷ ಮೌಲ್ಯದ ಚಿನ್ನಾಭರಣ ಲಪಟಾಯಿಸಿದ್ದ ಖತರ್ನಾಕ್ ಕಳ್ಳ ಪೊಲೀಸ್ ಬಲೆಗೆ

Sirsi house theft case painter arrested gold cash
Posted By: Sagaradventure
Updated on: Dec 13, 2025 | 9:06 AM

ಶಿರಸಿ: ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಐನಾತಿಯೊಬ್ಬ ಕೈಚಳಕ ತೋರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಶಿರಸಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ರಾಮನಬೈಲ್ ನಿವಾಸಿ, ವೃತ್ತಿಯಲ್ಲಿ ಪೇಂಟರ್ ಆಗಿರುವ ಮಹೇಶ ಪರಸಪ್ಪ ಬೋವಿ(31) ಬಂಧಿತ ಆರೋಪಿ.

ಡಿಸೆಂಬರ್ 7 ಮತ್ತು 8ರ ಮಧ್ಯರಾತ್ರಿ ಶಿರಸಿಯ ಮಾರಿಕಾಂಬಾ ನಗರದ 3ನೇ ಕ್ರಾಸ್‌ನಲ್ಲಿರುವ ‘ಸಂತೋಷ ನಿಲಯ’ದ ಮನೆಯಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಮನೆಯೊಳಗೆ ನುಗ್ಗಿ, ಕಬ್ಬಿಣದ ಕಪಾಟಿನಲ್ಲಿದ್ದ ಬರೋಬ್ಬರಿ 1.20 ಲಕ್ಷ ರೂಪಾಯಿ ನಗದು ಹಾಗೂ 9.25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು. ಈ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಡಿಸೆಂಬರ್ 12ರಂದು ಆರೋಪಿ ಮಹೇಶನ ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ಅದೇ ಸೋಗಿನಲ್ಲಿ ಕೃತ್ಯ ಎಸಗಿದ್ದನೇ ಎಂಬ ಅನುಮಾನ ಮೂಡಿದೆ.

ಬಂಧಿತನಿಂದ ಪೊಲೀಸರು 8.75 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 70,000 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂ. ಮೌಲ್ಯದ ಹೋಂಡಾ ಆಕ್ಟಿವಾ ಬೈಕ್ ಸೇರಿ ಒಟ್ಟು 9,95,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಎಸ್ಪಿ ದೀಪನ್ ಎಂ.ಎನ್., ಎಎಸ್ಪಿಗಳಾದ ಕೃಷ್ಣಮೂರ್ತಿ ಜಿ., ಜಗದೀಶ ನಾಯ್ಕ, ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐ ನಾರಾಯಣ ರಾಥೋಡ ನೇತೃತ್ವದ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಹನುಮಂತ್ ಮಾಕಾಪೂರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನೀಲ್, ಹನುಮಂತ ಕಬಾಡಿ, ರಾಜು ಎಮ್ ಹಾಗೂ ತಾಂತ್ರಿಕ ವಿಭಾಗದ ಉದಯ ಗುನಗಾ ಮತ್ತು ಬಬನ ಕದಂ ಅವರ ಕಾರ್ಯಕ್ಕೆ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

Shorts Shorts