ಯಲ್ಲಾಪುರ(ಉತ್ತರಕನ್ನಡ): ಪ್ರವಾಸದ ಮಜಾ ಕಳೆಯಲು ಸ್ನೇಹಿತರೊಂದಿಗೆ ಯಾಣಕ್ಕೆ ಹೊರಟಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಪ್ರವಾಸವು ದುರಂತದಲ್ಲಿ ಅಂತ್ಯಗೊಂಡ ಘಟನೆ ಯಲ್ಲಾಪುರದಲ್ಲಿ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿಂಬದಿ ಕುಳಿತಿದ್ದ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.
ಶನಿವಾರ ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಬೈಕ್‌ಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ ಹೊರಟಿತ್ತು. ಬಿಜಾಪುರದ ಸಿಂದಗಿ ಮೂಲದ ರಾಜೀವ ಭೀಮಾಶಂಕರ್ ಚೌದರಿ ಅವರು ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಯಾದಗಿರಿ ಮೂಲದ ವರ್ಧನ ವೆಂಕಟೇಶ ಶೆಟ್ಟಿ (19) ಹಿಂಬದಿ ಕುಳಿತಿದ್ದರು. ಸ್ನೇಹಿತರ ಇತರ ಬೈಕ್‌ಗಳ ಜೊತೆ ಇವರ ಬೈಕ್ ಕೂಡ ಅತಿಯಾದ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದೆ.
ಮಧ್ಯಾಹ್ನದ ಸುಮಾರಿಗೆ ಈ ಬೈಕ್ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದ ಎಚ್‌ಕೆಜಿಎನ್ ಸಿಮೆಂಟ್ ಫ್ಯಾಕ್ಟರಿ ಬಳಿ ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಬೈಕ್ ಎಡಭಾಗಕ್ಕೆ ಬಿದ್ದ ರಭಸಕ್ಕೆ ಹಿಂಬದಿ ಕುಳಿತಿದ್ದ ವರ್ಧನ ಶೆಟ್ಟಿ ಅವರ ತಲೆ ಹೆದ್ದಾರಿಗೆ ಬಲವಾಗಿ ಬಡಿದಿದೆ. ಪೆಟ್ಟಿನ ತೀವ್ರತೆಗೆ ವರ್ಧನ ಶೆಟ್ಟಿ ಅವರು ಸ್ಥಳದಲ್ಲೇ ಕೊ*ನೆಯುಸಿರೆಳೆದರು.
ಅಪಘಾತದ ವಿಷಯ ತಿಳಿದ ಕೂಡಲೇ ಯಲ್ಲಾಪುರ ಪಿಐ ರಮೇಶ ಹಾನಾಪುರ ಮತ್ತು ಪಿಎಸ್‌ಐ ಸಿದ್ದಪ್ಪ ಗುಡಿ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಗಾಯಗೊಂಡಿದ್ದ ಬೈಕ್ ಸವಾರ ರಾಜೀವ ಚೌದರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆಯಿದ್ದ ಮತ್ತೊಬ್ಬ ಎಂಬಿಬಿಎಸ್ ವಿದ್ಯಾರ್ಥಿ ಸೃಜನ ರಮೇಶ ಶೆಟ್ಟರ್ ಅವರು ನೀಡಿದ ಹೇಳಿಕೆಯನ್ವಯ, ಅತಿವೇಗವೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದ್ದು, ಚಾಲಕ ರಾಜೀವ ಚೌದರಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






