ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಮತ್ತು ಮೂರು ಬಾರಿ ಗ್ರ್ಯಾಮಿ (Grammy) ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ (Ricky Kej) ಅವರ ಬೆಂಗಳೂರಿನ ಮನೆಯಲ್ಲಿ ಕಳ್ಳತನ ನಡೆದಿದೆ. ಕಳೆದ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಕಳ್ಳರು ಮನೆಯ ಆವರಣದಲ್ಲಿರುವ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು (ಗಾರ್ಡ್) ಕದ್ದು ಪರಾರಿಯಾಗಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಅವರು ಝೊಮ್ಯಾಟೋ ಅಥವಾ ಸ್ವಿಗ್ಗಿ ಡೆಲಿವರಿ ಸಿಬ್ಬಂದಿಯಂತೆ (Delivery Boys) ಕಾಣಿಸಿಕೊಂಡಿದ್ದಾರೆ ಎಂದು ರಿಕ್ಕಿ ಕೇಜ್ ಆರೋಪಿಸಿದ್ದಾರೆ.
ಇಬ್ಬರಲ್ಲಿ ಒಬ್ಬ ರಸ್ತೆಯಲ್ಲಿ ಬೈಕ್‌ನಲ್ಲಿ ಕುಳಿತಿದ್ದರೆ, ಮತ್ತೊಬ್ಬ ಮನೆಯ ಆವರಣಕ್ಕೆ ಬಂದು ಸಂಪ್‌ನ ಮುಚ್ಚಳವನ್ನು ಕದ್ದು, ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಕಳ್ಳತನಕ್ಕೂ ಸುಮಾರು 15 ನಿಮಿಷ ಮುಂಚಿತವಾಗಿ ಇದೇ ರೀತಿ ಡೆಲಿವರಿ ಬಾಯ್‌ನಂತೆ ಕಾಣುವ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮನೆಯ ಮುಂದೆ ಬಂದಿದ್ದು, ಇದು ಪೂರ್ವಯೋಜಿತ ಕೃತ್ಯವಿರಬಹುದೆಂಬ ಅನುಮಾನಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮನವಿ:
ರಿಕ್ಕಿ ಕೇಜ್ ಅವರು ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಪೊಲೀಸರು, ದ್ವಿಚಕ್ರ ವಾಹನದ ನಂಬರ್ ಹಾಗೂ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.






