ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ವಿಪರೀತವಾಗಿದ್ದು, ಸಿಲಿಕಾನ್ ಸಿಟಿ ಮಂದಿ ನಡುಗುವಂತಾಗಿದೆ. ಡಿಸೆಂಬರ್ ತಿಂಗಳಲ್ಲಿ ಕಳೆದ 9 ವರ್ಷಗಳಲ್ಲೇ ಕಾಣದಂತಹ ಕೊರೆಯುವ ಚಳಿಗೆ ಬೆಂಗಳೂರು ಸಾಕ್ಷಿಯಾಗಿದ್ದು, ತಾಪಮಾನವು ದಾಖಲೆಯ ಮಟ್ಟದಲ್ಲಿ ಕುಸಿತ ಕಂಡಿದೆ.
ನಗರದ ತಾಪಮಾನವು ಬರೋಬ್ಬರಿ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬೆಂಗಳೂರು ದಕ್ಷಿಣದಲ್ಲಿ 10.1 ಡಿಗ್ರಿ, ಬೆಂಗಳೂರು ಗ್ರಾಮಾಂತರದಲ್ಲಿ 10.4 ಡಿಗ್ರಿ ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ 10.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
2016ರ ನಂತರ ಡಿಸೆಂಬರ್ ತಿಂಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಇದಾಗಿದ್ದು, ನಗರವು ಹಿಮದ ಹೊದಿಕೆಯಂತೆ ಭಾಸವಾಗುತ್ತಿದೆ. ಬಾಣಸವಾಡಿ, ಥಣಿಸಂದ್ರ ಮತ್ತು ಚೌಡೇಶ್ವರಿ ಮುಂತಾದ ಕಡೆಗಳಲ್ಲಿ ಮುಂಜಾನೆ ವೇಳೆ ತಾಪಮಾನ 12 ಡಿಗ್ರಿಯ ಆಸುಪಾಸಿನಲ್ಲಿತ್ತು ಎಂದು ವರದಿಯಾಗಿದೆ.
ಈ ಹಠಾತ್ ಬದಲಾವಣೆಗೆ ಕಾರಣವೇನು ಎಂಬುದನ್ನು ವಿವರಿಸಿರುವ ಐಎಂಡಿ ಅಧಿಕಾರಿ ಸಿ.ಎಸ್.ಪಾಟೀಲ್, “ಶುಷ್ಕ ಗಾಳಿ, ನಿರ್ಮಲ ಆಕಾಶ ಮತ್ತು ಸ್ಥಿರವಾದ ವಾತಾವರಣದ ಪರಿಸ್ಥಿತಿಗಳು ರಾತ್ರಿಯ ವೇಳೆ ವಿಕಿರಣ ತಂಪಾಗಿಸುವಿಕೆಗೆ (Radiation Cooling) ಕಾರಣವಾಗಿವೆ. ಅಲ್ಲದೆ, ಈಶಾನ್ಯ ಮಾರುತಗಳು ಬಲಗೊಂಡಿದ್ದು, ಉತ್ತರ ಮತ್ತು ಮಧ್ಯ ಭಾರತದ ಕಡೆಯಿಂದ ಬೀಸುತ್ತಿರುವ ಶೀತ ಗಾಳಿಯು ದಕ್ಷಿಣದ ಕಡೆಗೆ ನುಗ್ಗುತ್ತಿರುವುದರಿಂದ ಬೆಳಗಿನ ಜಾವ ಮಂಜು ಮತ್ತು ಚಳಿ ಹೆಚ್ಚಾಗಿದೆ” ಎಂದು ತಿಳಿಸಿದ್ದಾರೆ.
ಮುಂಬರುವ ವಾರದಲ್ಲಿ ರಾತ್ರಿ ವೇಳೆ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ತಾಪಮಾನವು 12°C ಮತ್ತು 14°C ನಡುವೆ ಏರಿಳಿತಗೊಳ್ಳುವ ಸಾಧ್ಯತೆಯಿದ್ದು, ಈ ಬಾರಿಯ ಚಳಿಗಾಲವು ವಾಡಿಕೆಗಿಂತ ಹೆಚ್ಚು ತೀವ್ರವಾಗಿರಲಿದೆ. ಬೆಂಗಳೂರು ಮಾತ್ರವಲ್ಲದೆ, ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿಯೂ ಚಳಿಯ ಅಬ್ಬರ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.






