ಬೆಂಗಳೂರು: ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಮೆರಿಕನ್ ಮೂಲದ ಯುವತಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ಒಳಗಾದಾಗ, ಸಮಯಪ್ರಜ್ಞೆ ಮೆರೆದು ಅವರ ಪ್ರಾಣ ಉಳಿಸಿದ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಉಸ್ತುವಾರಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡುವ ಮೂಲಕ ಅಂಜಲಿ ಅವರ ಮಾನವೀಯ ಸೇವೆಯನ್ನು ಕೊಂಡಾಡಿದ್ದಾರೆ.
ಘಟನೆಯ ವಿವರ: ಗೋವಾದಿಂದ ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಮೆರಿಕನ್ ಯುವತಿಯೊಬ್ಬರು ವಿಪರೀತ ನಡುಕಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಅವರ ನಾಡಿ ಬಡಿತ (Pulse) ಕ್ಷೀಣಿಸುತ್ತಿರುವುದನ್ನು ಗಮನಿಸಿದ ಡಾ. ಅಂಜಲಿ ನಿಂಬಾಳ್ಕರ್ ತಕ್ಷಣವೇ ಸ್ಪಂದಿಸಿದರು. ರೋಗಿಗೆ ಸಿಪಿಆರ್ (Cardio-Pulmonary Resuscitation) ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದರು. ಸುಮಾರು ಅರ್ಧ ಗಂಟೆಯ ನಂತರ ಯುವತಿ ಮತ್ತೆ ಕುಸಿದು ಬಿದ್ದಾಗಲೂ, ಎದೆಗುಂದದೆ ನಿರಂತರ ಪ್ರಯತ್ನ ನಡೆಸಿ ಆಕೆಯ ನಾಡಿ ಬಡಿತ ಸಹಜ ಸ್ಥಿತಿಗೆ ಮರಳುವಂತೆ ನೋಡಿಕೊಂಡರು. ವಿಮಾನ ಲ್ಯಾಂಡ್ ಆಗುವವರೆಗೂ ರೋಗಿಯ ಪಕ್ಕದಲ್ಲೇ ನಿಂತು ಆರೈಕೆ ಮಾಡಿದ ಅಂಜಲಿ, ವಿಮಾನ ನಿಲ್ದಾಣದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಲ್ಲಿಯೂ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿದರು.
ಸಿಎಂ ಸಿದ್ದರಾಮಯ್ಯ ಮೆಚ್ಚುಗೆ:
ಈ ಘಟನೆ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, “ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ America ಯುವತಿಯ ಪ್ರಾಣ ಉಳಿಸಿದ ಅಂಜಲಿ ನಿಂಬಾಳ್ಕರ್!
ಡಾ. ಅಂಜಲಿ ಪ್ರತಿಕ್ರಿಯೆ:
ಮುಖ್ಯಮಂತ್ರಿಗಳ ಪ್ರಶಂಸೆಗೆ ಪ್ರತಿಕ್ರಿಯಿಸಿರುವ ಡಾ. ಅಂಜಲಿ ನಿಂಬಾಳ್ಕರ್, “ಅಗತ್ಯವಿದ್ದಾಗಲೆಲ್ಲಾ ವೈದ್ಯೆಯಾಗಿ ಸೇವೆ ಸಲ್ಲಿಸುವುದು ನನ್ನ ಕರ್ತವ್ಯ. ಸಾಮಾಜಿಕ ಬದ್ಧತೆಗೆ ಹೆಸರಾಗಿರುವ ನಿಮ್ಮಿಂದ ಪ್ರಶಂಸೆ ಸಿಕ್ಕಿರುವುದು ನನಗೆ ಮತ್ತಷ್ಟು ಸ್ಫೂರ್ತಿ ನೀಡಿದೆ” ಎಂದು ಧನ್ಯವಾದ ಅರ್ಪಿಸಿದ್ದಾರೆ.






