ಹುಬ್ಬಳ್ಳಿ: ದಾರಿಯಲ್ಲಿ ಹೋಗುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾ*ಮುಕನೊಬ್ಬನಿಗೆ ಸಾರ್ವಜನಿಕರೇ ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ. ಆರೋಪಿಯ ಕಿರುಕುಳದಿಂದ ರೋಸಿಹೋಗಿದ್ದ ಸ್ಥಳೀಯರು ಕಾನೂನು ಕೈಗೆತ್ತಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಯು ಈಶ್ವರ ನಗರದ ವ್ಯಾಪ್ತಿಯಲ್ಲಿ ಓಡಾಡುವ ಮಹಿಳೆಯರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಪದೇ ಪದೇ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಆತನ ವಿಕೃತ ವರ್ತನೆ ಮತ್ತು ಅಸಭ್ಯ ಚೇಷ್ಠೆಗಳಿಂದ ಬೇಸತ್ತಿದ್ದ ಸಾರ್ವಜನಿಕರು, ಇಂದು(ಭಾನುವಾರ) ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ರೊಚ್ಚಿಗೆದ್ದ ಮಹಿಳೆಯರು ಸೇರಿದಂತೆ ನೆರೆದಿದ್ದ ಜನರು ಆರೋಪಿಗೆ ಚಪ್ಪಲಿಯಿಂದ ಹೊಡೆದು, ಹಿಗ್ಗಾಮುಗ್ಗಾ ಥಳಿಸಿ ತಕ್ಕ ಪಾಠ ಕಲಿಸಿದ್ದಾರೆ.
ಈ ಘಟನೆಯು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮಹಿಳೆಯರ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನು ಸ್ಥಳೀಯರು ಈ ಮೂಲಕ ರವಾನಿಸಿದ್ದು, ಕಾಮುಕನಿಗೆ ಥಳಿಸುತ್ತಿರುವ ದೃಶ್ಯಗಳು ಸಂಚಲನ ಮೂಡಿಸಿವೆ.






