ನವದೆಹಲಿ: “ಮತ ಕಳ್ಳತನ ಮಾಡುವವರು ದೇಶದ್ರೋಹಿಗಳು (ಗದ್ದಾರ್). ಸಂವಿಧಾನ ಮತ್ತು ಮತದಾನದ ಹಕ್ಕನ್ನು ಉಳಿಸಲು ಇಂತಹವರನ್ನು ಅಧಿಕಾರದಿಂದ ಕೆಳಗಿಳಿಸಬೇಕು,” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ‘ವೋಟ್ ಚೋರ್, ಗದ್ದಿ ಚೋಡ್’ (ಮತ ಕಳ್ಳರೇ, ಕುರ್ಚಿ ಬಿಡಿ) ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶವನ್ನು ಉಳಿಸಲು ಸಾಧ್ಯವಿದ್ದು, ಪಕ್ಷದ ಸಿದ್ಧಾಂತವನ್ನು ಒಗ್ಗೂಡಿ ಬಲಪಡಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಅವರು ಕರೆ ನೀಡಿದರು.
ಆರ್‌ಎಸ್‌ಎಸ್ ಸಿದ್ಧಾಂತವು ದೇಶವನ್ನು ನಾಶಮಾಡಲಿದೆ ಎಂದು ಆರೋಪಿಸಿದ ಖರ್ಗೆ, “ಬಿಜೆಪಿಯವರು ಗದ್ದಾರ್‌ಗಳು (ದ್ರೋಹಿಗಳು) ಮತ್ತು ಡ್ರಾಮೇಬಾಜ್‌ಗಳು (ನಾಟಕದವರು). ಅವರನ್ನು ಅಧಿಕಾರದಿಂದ ತೆಗೆದುಹಾಕುವ ಅವಶ್ಯಕತೆಯಿದೆ,” ಎಂದು ಗುಡುಗಿದರು.
ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ ಖರ್ಗೆ, ವೈಯಕ್ತಿಕ ವಿಚಾರವನ್ನೂ ಪ್ರಸ್ತಾಪಿಸಿದರು. “ಬೆಂಗಳೂರಿನಲ್ಲಿ ನನ್ನ ಮಗನ ಶಸ್ತ್ರಚಿಕಿತ್ಸೆ ಇದ್ದರೂ ನಾನು ಅಲ್ಲಿಗೆ ಹೋಗಲಿಲ್ಲ. 140 ಕೋಟಿ ಭಾರತೀಯರನ್ನು ಉಳಿಸುವುದು ನನಗೆ ಮುಖ್ಯವೆಂದು ಭಾವಿಸಿ, ಈ ರ‍್ಯಾಲಿಯಲ್ಲಿ ಭಾಗವಹಿಸಲು ನಾನು ಇಲ್ಲೇ ಉಳಿದುಕೊಂಡೆ” ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.






