ಬೆಂಗಳೂರು: ಹೈಕಮಾಂಡ್ ಸೂಚನೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ತುಸು ತಣ್ಣಗಾಗಿದ್ದ ‘ಸಿಎಂ ಕುರ್ಚಿ ಕದನ’, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಿಎಂ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಯಿಂದಾಗಿ ಮತ್ತೆ ಹೊತ್ತಿಕೊಂಡಿದೆ. ಈ ರಾಜಕೀಯ ಸಂಚಲನದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು(ಭಾನುವಾರ) ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿ ತಲುಪಿದ್ದು, ಸಿಎಂ ಸಿದ್ದರಾಮಯ್ಯ ಭಾನುವಾರ ಬೆಳಿಗ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಡಿಸೆಂಬರ್ 21 ಅಥವಾ 22ರಂದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ನಾಯಕರು ದೆಹಲಿಗೆ ತೆರಳಬೇಕಿತ್ತು. ಆದರೆ, ಈಗ ಪ್ರತಿಭಟನೆಯ ನೆಪದಲ್ಲಿ ದೆಹಲಿಗೆ ತೆರಳುತ್ತಿರುವ ನಾಯಕರು, ಹೈಕಮಾಂಡ್ ನಾಯಕರೊಂದಿಗೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ವೇಳೆ ಯತೀಂದ್ರ ಅವರ ಹೇಳಿಕೆ, ಬೆಳಗಾವಿ ಅಧಿವೇಶನ, ಇತ್ತೀಚಿನ ‘ಡಿನ್ನರ್ ಮೀಟ್’ ಮತ್ತು ಇತರ ರಾಜಕೀಯ ವಿದ್ಯಮಾನಗಳ ಬಗ್ಗೆ ವರಿಷ್ಠರಿಗೆ ವರದಿ ಒಪ್ಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಸಚಿವರು, ಶಾಸಕರು ಸೇರಿದಂತೆ ಪ್ರಮುಖ ನಾಯಕರ ದೊಡ್ಡ ದಂಡೇ ದೆಹಲಿಗೆ ಲಗ್ಗೆ ಇಟ್ಟಿದೆ. ಆದರೆ, ಸಿಎಂ ಮತ್ತು ಡಿಸಿಎಂ ನಡುವಿನ ಶೀತಲ ಸಮರದ ಹಿನ್ನೆಲೆಯಲ್ಲಿ, ಈ ದೆಹಲಿ ಯಾತ್ರೆಯು ಕೇವಲ ಪ್ರತಿಭಟನೆಗೆ ಸೀಮಿತವಾಗದೆ, ನಾಯಕರ ಶಕ್ತಿ ಪ್ರದರ್ಶನ ಮತ್ತು ಬಣಗಾರಿಕೆಯ ಪ್ರದರ್ಶನವಾಗಿ ಮಾರ್ಪಡುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಈ ಭೇಟಿಯು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಪೀಠಿಕೆಯಾಗಲಿದೆಯೇ ಎಂಬುದು ಕುತೂಹಲದ ವಿಷಯವಾಗಿದೆ.






