ಮಡಿಕೇರಿ: ಪ್ರವಾಸಿ ಬಸ್ಸೊಂದು ನಡುರಸ್ತೆಯಲ್ಲೇ ಬೆಂಕಿಗಾಹುತಿಯಾಗಿ ಧಗಧಗನೆ ಹೊತ್ತಿ ಉರಿದ ಭಯಾನಕ ಘಟನೆ ವಿರಾಜಪೇಟೆ ತಾಲೂಕಿನ ಮಾಕುಟ್ಟ ಸಮೀಪ ಸಂಭವಿಸಿದೆ. ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ಸೋಮವಾರ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಕಿಗಾಹುತಿಯಾದ ಬಸ್ ಕೇರಳ ನೋಂದಣಿಯ ಖಾಸಗಿ ಪ್ರವಾಸಿ ಬಸ್ ಎಂದು ಗುರುತಿಸಲಾಗಿದೆ. ಮೈಸೂರಿಗೆ ಪ್ರವಾಸಿಗರನ್ನು ಕರೆತಂದು ಬಿಟ್ಟು, ಅಲ್ಲಿಂದ ವಾಪಸ್ ಕೇರಳಕ್ಕೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದ ಕಾರಣ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಂದು ವೇಳೆ ಬಸ್‌ನಲ್ಲಿ ಪ್ರವಾಸಿಗರು ತುಂಬಿರುತ್ತಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಮತ್ತು ನಿರ್ವಾಹಕ ಕೆಳಗಿಳಿದಿದ್ದರಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಡುರಸ್ತೆಯಲ್ಲೇ ಬಸ್ ಹೊತ್ತಿ ಉರಿದ ಪರಿಣಾಮ, ಕೊಡಗು ಮತ್ತು ಕೇರಳವನ್ನು ಸಂಪರ್ಕಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.






