ಚೆನ್ನೈ: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ! ನರಸಾಪುರ ಮತ್ತು ಚೆನ್ನೈ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಭಾರತೀಯ ರೈಲ್ವೆ ಇಲಾಖೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಪರಿಚಯಿಸಿದೆ. ನರಸಾಪುರದಿಂದ ಚೆನ್ನೈಗೆ ಇಂದಿನಿಂದಲೇ (ಡಿ.15) ಈ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಚೆನ್ನೈನಿಂದ ನರಸಾಪುರಕ್ಕೆ ಡಿಸೆಂಬರ್ 17 ರಿಂದ ಸೇವೆ ಲಭ್ಯವಾಗಲಿದೆ. ಈ ಹೊಸ ರೈಲು ಉಭಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ.
ವೇಳಾಪಟ್ಟಿ ಮತ್ತು ಪ್ರಯಾಣದ ಅವಧಿ:
ಈ ರೈಲು ಚೆನ್ನೈ ಸೆಂಟ್ರಲ್ ಮತ್ತು ವಿಜಯವಾಡ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 20677/20678) ನ ವಿಸ್ತೃತ ಸೇವೆಯಾಗಿದೆ.
ನರಸಾಪುರದಿಂದ ಚೆನ್ನೈಗೆ (ರೈಲು ಸಂಖ್ಯೆ 20678): ನರಸಾಪುರದಿಂದ ಮಧ್ಯಾಹ್ನ 2:50ಕ್ಕೆ ಹೊರಡುವ ರೈಲು, ಅದೇ ದಿನ ರಾತ್ರಿ 11:45ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಇದು ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಸಂಚರಿಸಲಿದೆ.
ಚೆನ್ನೈನಿಂದ ನರಸಾಪುರಕ್ಕೆ (ರೈಲು ಸಂಖ್ಯೆ 20677): ಬೆಳಿಗ್ಗೆ 5:30ಕ್ಕೆ ಚೆನ್ನೈ ಸೆಂಟ್ರಲ್ ನಿಂದ ಹೊರಟು ಮಧ್ಯಾಹ್ನ 2:10ಕ್ಕೆ ನರಸಾಪುರ ತಲುಪಲಿದೆ.
ಈ ರೈಲು ಒಟ್ಟು 655 ಕಿ.ಮೀ ದೂರವನ್ನು ಕೇವಲ 8 ಗಂಟೆ 55 ನಿಮಿಷಗಳಲ್ಲಿ ಕ್ರಮಿಸಲಿದೆ.
ಪ್ರಮುಖ ನಿಲ್ದಾಣಗಳು: ಚೆನ್ನೈ ಮತ್ತು ನರಸಾಪುರ ನಡುವಿನ ಪ್ರಯಾಣದಲ್ಲಿ ಈ ಸೆಮಿ-ಹೈಸ್ಪೀಡ್ ರೈಲು ರೇಣಿಗುಂಟಾ ಜಂಕ್ಷನ್, ನೆಲ್ಲೂರು, ಓಂಗೋಲ್, ತೆನಾಲಿ ಜಂಕ್ಷನ್, ವಿಜಯವಾಡ ಜಂಕ್ಷನ್, ಗುಡಿವಾಡ ಜಂಕ್ಷನ್, ಭೀಮಾವರಂ ಟೌನ್ ಸೇರಿ ಒಟ್ಟು 7 ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಟಿಕೆಟ್ ದರ ಎಷ್ಟು?:
ನರಸಾಪುರದಿಂದ ಚೆನ್ನೈಗೆ ಪ್ರಯಾಣಿಸಲು ಎಸಿ ಚೇರ್ ಕಾರ್ (AC Chair Car) ಟಿಕೆಟ್ ದರ 1635 ರೂ. ಗಳಾಗಿದ್ದು, ಎಕ್ಸಿಕ್ಯೂಟಿವ್ ಚೇರ್ ಕಾರ್ (Executive Chair Car) ನಲ್ಲಿ ಪ್ರಯಾಣಿಸಲು 3030 ರೂ. ದರ ನಿಗದಿಪಡಿಸಲಾಗಿದೆ. ಆಂಧ್ರಪ್ರದೇಶದ ಕರಾವಳಿ ಭಾಗದಿಂದ ತಮಿಳುನಾಡಿನ ರಾಜಧಾನಿಗೆ ತೆರಳುವವರಿಗೆ ಈ ರೈಲು ವರದಾನವಾಗಲಿದೆ.






