ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಬಸ್‌ಗಳ ನಿರ್ವಹಣೆಯನ್ನು ಸುಧಾರಿಸಲು ಮತ್ತು ಮಾರ್ಗಮಧ್ಯೆ ಸಂಭವಿಸುವ ಅಪಘಾತ ಹಾಗೂ ಅವಘಡಗಳ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಅಪಘಾತ ತುರ್ತು ಸ್ಪಂದನ ವಾಹನಗಳಿಗೆ (Accident Emergency Response Vehicles) ಚಾಲನೆ ನೀಡಲಾಗಿದೆ.
ಈ ವಾಹನಗಳನ್ನು ‘ಮೊಬೈಲ್ ವರ್ಕ್‌ಶಾಪ್’ ಮಾದರಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ನಿಗಮದ ಬಸ್‌ಗಳು ಮಾರ್ಗ ಮಧ್ಯೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತಾಗ ಶೀಘ್ರವಾಗಿ ರಿಪೇರಿ ಮಾಡಲು ಸಹಾಯಕವಾಗಲಿವೆ. ಪ್ರಾರಂಭಿಕ ಹಂತದಲ್ಲಿ, ಈ ಎರಡು ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಮತ್ತು ಮೈಸೂರು ಕೇಂದ್ರ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಮಂಡ್ಯ ಪ್ರದೇಶಗಳಲ್ಲಿ ಅಪಘಾತಗಳು ಮತ್ತು ಬ್ರೇಕ್ ಡೌನ್ ಆದ KSRTC ಬಸ್‌ಗಳನ್ನು ಶೀಘ್ರವಾಗಿ ರಿಪೇರಿಗೊಳಿಸುವ ಮೂಲಕ, ತಾಂತ್ರಿಕ ದೋಷದಿಂದಾಗಿ ರಸ್ತೆಯಲ್ಲಿ ನಿಲ್ಲುವ ವಾಹನಗಳಿಂದ ಉಂಟಾಗುವ ಸಂಚಾರ ಸಮಸ್ಯೆ (Traffic Congestion) ಮತ್ತು ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ಪರಿಹರಿಸಲು ಈ ತುರ್ತು ಸ್ಪಂದನ ವಾಹನಗಳು ಸಹಕಾರಿಯಾಗಲಿವೆ.






