ಬೆಂಗಳೂರು: ಬೆಂಗಳೂರು ಪೊಲೀಸರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಹೆದರಿ ಯುವತಿಯೊಬ್ಬಳು ಹೋಟೆಲ್‌ನ ಬಾಲ್ಕನಿಯಿಂದ ಕೆಳಗೆ ಹಾರಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಂದಲಹಳ್ಳಿ ನಿವಾಸಿ ವೈಷ್ಣವಿ (21) ಎಂಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಶನಿವಾರ ರಾತ್ರಿ ಹೆಚ್‌ಎಎಲ್ (HAL) ನ ಎಇಸಿಎಸ್ ಲೇಔಟ್‌ನ ಒಂದು ಹೋಟೆಲ್ ನಲ್ಲಿ ವೈಷ್ಣವಿ ತನ್ನ 8 ಜನ ಸ್ನೇಹಿತರೊಂದಿಗೆ ಸೇರಿ ಪಾರ್ಟಿ ಮಾಡಲು ಮೂರು ರೂಮ್‌ಗಳನ್ನು ಬುಕ್ ಮಾಡಿದ್ದರು. ಈ ವೇಳೆ ಹಾಡುಗಳನ್ನು ಹಾಕಿಕೊಂಡು ಯುವಕ-ಯುವತಿಯರು ಡ್ಯಾನ್ಸ್ ಮಾಡುತ್ತಿದ್ದರು. ಪಾರ್ಟಿ ಮತ್ತು ಡ್ಯಾನ್ಸ್ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಹೋಟೆಲ್‌ಗೆ ಆಗಮಿಸಿದ್ದಾರೆ.
ಪೊಲೀಸರು ಬಂದ ವಿಚಾರ ತಿಳಿದ ತಕ್ಷಣ ವೈಷ್ಣವಿ ಎಂಬ ಯುವತಿ ಭಯದಿಂದ ಹೋಟೆಲ್‌ನ ಬಾಲ್ಕನಿಗೆ ತೆರಳಿದ್ದಾಳೆ. ಆತಂಕದಿಂದ ಆಕೆ ಬಾಲ್ಕನಿಯಿಂದ ಕೆಳಗೆ ಹಾರಿದ್ದು, ಕಬ್ಬಿಣದ ಗ್ರಿಲ್ಸ್ ಮೇಲೆ ಬಿದ್ದ ಪರಿಣಾಮ ಆಕೆಯ ತಲೆ ಮತ್ತು ಮೈ ಕೈಗಳಿಗೆ ಗಂಭೀರ ಗಾಯಗಳಾಗಿವೆ.
ಘಟನೆ ನಡೆದ ತಕ್ಷಣವೇ ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯು (ICU) ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಮೇಲೆ ಹಣ ಕೇಳಿದ ಆರೋಪ:
ಈ ಘಟನೆಯ ಕುರಿತು ಪೊಲೀಸರ ಮೇಲೆ ಗಂಭೀರವಾದ ‘ಹಣ ವಸೂಲಿ’ ಆರೋಪ ಕೇಳಿಬಂದಿದೆ. ಪಾರ್ಟಿ ನಡೆಯುತ್ತಿರುವ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಹೋಟೆಲ್‌ಗೆ ಆಗಮಿಸಿ, ಪಾರ್ಟಿ ವಿಡಿಯೋ ತೋರಿಸಿ ದೂರು ಬಂದಿದೆ ಎಂದು ಹೇಳಿದ್ದಾರೆ. ನಂತರ, ಅವರು ಯುವಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಯುವಕರು ಹಣವನ್ನು ‘ಫೋನ್‌ಪೇ’ (PhonePe) ಮಾಡುವುದಾಗಿ ಹೇಳಿದಾಗ, ಪೊಲೀಸರು ನಗದು (Cash) ಯನ್ನೇ ಕೇಳಿದರು. ಹಣ ತರಲು ಯುವಕನೊಬ್ಬ ಎಟಿಎಂಗೆ ಹೋಗಲು ಕೆಳಗೆ ಬಂದಿದ್ದಾಗ, ಈ ಕಡೆ ಯುವತಿ ಬಾಲ್ಕನಿಯಿಂದ ಹಾರಿದ್ದಳು ಎಂದು ಯುವಕನೊಬ್ಬ ದೂರಿನಲ್ಲಿ ದಾಖಲಿಸಿದ್ದಾನೆ.
ಈ ದೂರಿನ ಮೇರೆಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






