ರಾಮನಗರ: ತಂತ್ರಜ್ಞಾನದ ಮುಂದುವರಿದ ಈ ಯುಗದಲ್ಲಿ, ವೈಯಕ್ತಿಕವಾಗಿ ಭಾಗಿಯಾಗಲು ಸಾಧ್ಯವಾಗದಿದ್ದರೂ ಶುಭ ಕಾರ್ಯಗಳನ್ನು ನಿಲ್ಲಿಸುವ ಅಗತ್ಯವಿಲ್ಲ ಎಂಬುದಕ್ಕೆ ರಾಮನಗರ ಮತ್ತು ಉಡುಪಿಯ ಈ ಜೋಡಿ ಸಾಕ್ಷಿಯಾಗಿದೆ. ಕೆನಡಾ (Canada) ಮತ್ತು ಭಾರತದ (India) ನಡುವಿನ ಸುಮಾರು 12 ಗಂಟೆಗಳ ಕಾಲಮಾನದ ವ್ಯತ್ಯಾಸವನ್ನೂ ಲೆಕ್ಕಿಸದೆ, ವೀಡಿಯೊ ಕಾನ್ಫರೆನ್ಸ್ ಮೂಲಕ ನಿಶ್ಚಿತಾರ್ಥ (Engagement) ನೆರವೇರಿದೆ.
ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್.ಎಸ್ ಮತ್ತು ಉಡುಪಿಯ ನಿವಾಸಿ ಮೇಘ. ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್.ಎಸ್ ಅವರಿಗೆ ರಜೆ ಸಿಗದ ಕಾರಣ, ಮುಂದಿನ ತಿಂಗಳು ಜನವರಿ 7 ಮತ್ತು 8ರಂದು ನಡೆಯಲಿರುವ ಮದುವೆಯ ಹಿನ್ನೆಲೆಯಲ್ಲಿ ನಿಶ್ಚಿತಾರ್ಥವನ್ನು ವಿಡಿಯೋ ಮೂಲಕ ನಡೆಸಲು ನಿರ್ಧರಿಸಲಾಯಿತು.
ಅದರಂತೆ ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಡೆದ ಈ ನಿಶ್ಚಿತಾರ್ಥವು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ವಧು-ವರರಿಬ್ಬರೂ ಪರಸ್ಪರ ಉಂಗುರವನ್ನು ಕ್ಯಾಮೆರಾಗಳಿಗೆ ತೋರಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು. ಅಲ್ಲದೆ, ಕ್ಯಾಮರಾಕ್ಕೆ ಆರತಿ ಬೆಳಗಿ, ಹಿರಿಯರು ಮಂತ್ರಾಕ್ಷತೆ ಹಾಕಿ ಹೊಸ ಜೋಡಿಗೆ ಶುಭ ಕೋರಿದರು.
ಉಡುಪಿಯಲ್ಲಿ ಪ್ರಾತಃಕಾಲದಲ್ಲಿ ಈ ಶುಭ ಕಾರ್ಯ ನಡೆದರೆ, ಅದೇ ಸಮಯದಲ್ಲಿ ಕೆನಡಾದಲ್ಲಿ ಮಧ್ಯರಾತ್ರಿ ಆಗಿತ್ತು. ಎರಡು ಕುಟುಂಬಗಳ ಸಂಬಂಧಿಕರು ಈ ವಿಶಿಷ್ಟ ಆನ್‌ಲೈನ್ ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು.






