ಮಂಗಳೂರು: ಇಂಡೋನೇಷ್ಯಾದಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳಲಾದ ಕೆಳದರ್ಜೆಯ ಅಡಿಕೆಗೆ ಕ್ಯಾನ್ಸರ್ ಕಾರಕ ರಾಸಾಯನಿಕಗಳನ್ನು ಲೇಪಿಸಿ ಮಾರುಕಟ್ಟೆಗೆ ಬಿಡುತ್ತಿರುವ ಆತಂಕಕಾರಿ ಜಾಲವೊಂದರ ಸುಳಿವು ಸಿಕ್ಕಿದ್ದು, ಇದರ ಬೆನ್ನತ್ತಿದ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳ ತಂಡ ಮಂಗಳೂರಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಕರಾವಳಿ ನಗರಿಯ ಬಂದರು ಮತ್ತು ಬೈಕಂಪಾಡಿ ಪ್ರದೇಶಗಳಲ್ಲಿರುವ ಅಡಿಕೆ ಗೋದಾಮುಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.
ಮಹಾರಾಷ್ಟ್ರ FDA ತಂಡವು ಗೋದಾಮುಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಂದ ಮಾಹಿತಿ ಸಂಗ್ರಹಿಸಿದ್ದು, ಗೋಣಿ ಚೀಲಗಳಿಗೆ ಬರೆಯುವ ಇಂಕ್, ಸಂಶಯಾಸ್ಪದ ಬಾಟಲಿಗಳು ಮತ್ತು ಕ್ಯಾನ್‌ಗಳ ಫೋಟೋ ಹಾಗೂ ವಿಡಿಯೋ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಅಷ್ಟೇ ಅಲ್ಲದೆ, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗಕ್ಕೂ ಭೇಟಿ ನೀಡಿ, ಗೋದಾಮುಗಳ ತಪಾಸಣೆ ಮತ್ತು ನಿಯಮಾವಳಿಗಳ ಪಾಲನೆ ಕುರಿತು ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿದೆ.
ಮೂಲಗಳ ಪ್ರಕಾರ, ಇಂಡೋನೇಷ್ಯಾದಲ್ಲಿ ಕಳಪೆ ಎಂದು ತಿರಸ್ಕರಿಸಲ್ಪಟ್ಟ ಅಡಿಕೆಯನ್ನು ಅಕ್ರಮವಾಗಿ ಹಡಗುಗಳ ಮೂಲಕ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ತರಿಸಲಾಗುತ್ತಿದೆ. ಈ ಅಡಿಕೆಯನ್ನು ಮಂಗಳೂರು ಮತ್ತು ಕೇರಳದಲ್ಲಿ ಗ್ರೇಡಿಂಗ್ ಮಾಡಿ, ಅಡಿಕೆ ರಸದ ಬಣ್ಣವನ್ನೇ ಹೋಲುವ ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ.
ಬಳಿಕ, ಮಂಗಳೂರಿನ ಸುರತ್ಕಲ್‌ನಿಂದ ಕೊಂಕಣ ರೈಲ್ವೆಯ ರೋಲ್ ಆನ್-ರೋಲ್ ಆಫ್ (Ro-Ro) ಸೇವೆಯ ಮೂಲಕ ಲಾರಿಗಳಲ್ಲಿ ಮಹಾರಾಷ್ಟ್ರದ ಕೊಲಾಡ್‌ಗೆ ಸಾಗಿಸಲಾಗುತ್ತದೆ. ಅಲ್ಲಿಂದ ರಾಯಘಡ್‌ನ ಗೋದಾಮುಗಳಿಗೆ ಮತ್ತು ಅಂತಿಮವಾಗಿ ನಾಗಪುರದ ಪಾನ್ ಮಸಾಲಾ ಹಾಗೂ ಗುಟ್ಕಾ ಕಂಪನಿಗಳಿಗೆ ರವಾನೆಯಾಗುತ್ತದೆ.
ಈ ಬಗ್ಗೆ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಸುಬ್ರಹ್ಮಣ್ಯ ಭಟ್ ಮಾತನಾಡಿ, “ಕಲಬೆರಕೆಕೋರರು ಸುಮಾರು ಹತ್ತು ಬಗೆಯ ಕಾರ್ಸಿನೋಜೆನಿಕ್ (ಕ್ಯಾನ್ಸರ್ ಕಾರಕ) ರಾಸಾಯನಿಕಗಳನ್ನು ಬಳಸುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರ ಪ್ರಕಾರ, ಗುಟ್ಕಾ ಕಂಪನಿಗಳು ಸ್ಥಳೀಯ ಅಡಿಕೆ ಬದಲು ಈ ಕಳಪೆ ಅಡಿಕೆಯನ್ನು ಬಳಸುತ್ತಿರುವುದರಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗದ ರೈತರಿಗೆ ಭಾರಿ ನಷ್ಟವಾಗುತ್ತಿದೆ. “ನೈಜ ಅಡಿಕೆಗೆ ಬೆಲೆ ಸಿಗುತ್ತಿಲ್ಲ ಮತ್ತು ಈ ಕಲಬೆರಕೆಯಿಂದಾಗಿ ಇಡೀ ಅಡಿಕೆ ಬೆಳೆಗೆ ‘ಕ್ಯಾನ್ಸರ್ ಕಾರಕ’ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ” ಎಂದು ಪ್ರಗತಿಪರ ಕೃಷಿಕ ಈಶ್ವರ ಭಟ್ ಅಳಲು ತೋಡಿಕೊಂಡಿದ್ದಾರೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಇಲಾಖೆ ನೀಡಿದ ತೆರಿಗೆ ವಂಚನೆಯ ಸುಲಿವಿನ ಜಾಡು ಹಿಡಿದು ಮಹಾರಾಷ್ಟ್ರ ಅಧಿಕಾರಿಗಳು ಈ ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ ಒಂದು ತಂಡ ಮಂಗಳೂರು ಮತ್ತು ಕೇರಳದಲ್ಲಿ ಬೀಡುಬಿಟ್ಟಿದ್ದು, ಈ ಬೃಹತ್ ಕಲಬೆರಕೆ ದಂಧೆಯ ಆಳವನ್ನು ಜಾಲಾಡುತ್ತಿದೆ.






