ಬೆಂಗಳೂರು: ಐಪಿಎಲ್ 2026ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಹೊಸ ದಾಖಲೆ ಬರೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬರೋಬ್ಬರಿ 25.20 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಗ್ರೀನ್ ಅವರನ್ನು ಖರೀದಿಸಿದ್ದು, ಇದರೊಂದಿಗೆ ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಕುತೂಹಲಕಾರಿ ಸಂಗತಿಯೆಂದರೆ ಹರಾಜಿನ ಪೂರ್ಣ ಮೊತ್ತ ಗ್ರೀನ್ ಅವರ ಜೇಬು ಸೇರುವುದಿಲ್ಲ.
ಹಣ ಕಡಿತಕ್ಕೆ ಕಾರಣವೇನು?
ಬಿಸಿಸಿಐ ಜಾರಿಗೆ ತಂದಿರುವ ಹೊಸ “ಗರಿಷ್ಠ ಶುಲ್ಕ” (Maximum Fee) ನಿಯಮದ ಪ್ರಕಾರ, ಕ್ಯಾಮರೂನ್ ಗ್ರೀನ್ ಅವರಿಗೆ ಕೇವಲ 18 ಕೋಟಿ ರೂ. ಮಾತ್ರ ಲಭ್ಯವಾಗಲಿದೆ. ಉಳಿದ 7.20 ಕೋಟಿ ರೂ. ನೇರವಾಗಿ ಬಿಸಿಸಿಐ ಖಾತೆಗೆ ಜಮೆಯಾಗಲಿದೆ. ಮಿನಿ ಹರಾಜುಗಳಲ್ಲಿ ಕೃತಕ ಬೇಡಿಕೆ ಸೃಷ್ಟಿಸಿ, ಪೂರೈಕೆ ಕೊರತೆಯ ಲಾಭ ಪಡೆಯಲು ಕೆಲವು ವಿದೇಶಿ ಆಟಗಾರರು ಪ್ರಯತ್ನಿಸುತ್ತಿದ್ದಾರೆ ಎಂಬ ಫ್ರಾಂಚೈಸಿಗಳ ದೂರಿನನ್ವಯ, ಬಿಸಿಸಿಐ ಕಳೆದ ವರ್ಷ ಈ ಕಠಿಣ ನಿಯಮವನ್ನು ಜಾರಿಗೆ ತಂದಿತ್ತು.
ಈ ನಿಯಮದ ಪ್ರಕಾರ, ವಿದೇಶಿ ಆಟಗಾರನೊಬ್ಬ ಪಡೆಯಬಹುದಾದ ಗರಿಷ್ಠ ವೇತನವನ್ನು 18 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ (ಇದು 2025ರ ಮೆಗಾ ಹರಾಜಿನ ಗರಿಷ್ಠ ರಿಟೆನ್ಷನ್ ಸ್ಲ್ಯಾಬ್ ಆಗಿತ್ತು). ಹರಾಜಿನಲ್ಲಿ ಬಿಡ್ ಈ ಮೊತ್ತವನ್ನು ಮೀರಿದರೆ, ಆ ಹೆಚ್ಚುವರಿ ಹಣವನ್ನು ಬಿಸಿಸಿಐ ತನ್ನ ಆಟಗಾರರ ಕಲ್ಯಾಣ ನಿಧಿಗೆ ಬಳಸಿಕೊಳ್ಳುತ್ತದೆ. ಹೀಗಾಗಿ ಕೆಕೆಆರ್ 25.2 ಕೋಟಿ ನೀಡಿದರೂ, ಗ್ರೀನ್ ಅವರಿಗೆ ಸಿಗುವುದು 18 ಕೋಟಿ ರೂ. ಮಾತ್ರ.
ಹಳೆಯ ದಾಖಲೆಗಳು ಉಡೀಸ್:
ಈ ಹಿಂದೆ 2024ರ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಮಾರಾಟವಾಗಿದ್ದು ವಿದೇಶಿ ಆಟಗಾರನೊಬ್ಬನ ಗರಿಷ್ಠ ಮೊತ್ತವಾಗಿತ್ತು. ಪ್ಯಾಟ್ ಕಮಿನ್ಸ್ ಕೂಡ 20.50 ಕೋಟಿ ರೂ. ಪಡೆದಿದ್ದರು. ಇದೀಗ ಗ್ರೀನ್ ಈ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಆದಾಗ್ಯೂ, ಐಪಿಎಲ್ ಇತಿಹಾಸದ ಸಾರ್ವಕಾಲಿಕ ದುಬಾರಿ ಆಟಗಾರನ ದಾಖಲೆ ಇನ್ನೂ ರಿಷಬ್ ಪಂತ್ (27 ಕೋಟಿ ರೂ., ಲಕ್ನೋ ಸೂಪರ್ ಜೈಂಟ್ಸ್, 2025ರ ಮೆಗಾ ಹರಾಜು) ಹೆಸರಿನಲ್ಲೇ ಉಳಿದಿದೆ.






