ವಿಜಯನಗರ: ವಿಜಯನಗರ ಜಿಲ್ಲಾ ಆರೋಗ್ಯ ಅಧಿಕಾರಿ (DHO) ಡಾ. ಶಂಕರ್ ನಾಯ್ಕ್ ಅವರಿಗೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ (Lokayukta) ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಡಾ. ಶಂಕರ್ ನಾಯ್ಕ್ ಅವರ ಕಾರ್ಯಸ್ಥಳವಾಗಿರುವ ತಾಯಿ ಮಕ್ಕಳ ಆಸ್ಪತ್ರೆ ಬಳಿಯ ಡಿಎಚ್‌ಓ ಕಚೇರಿ, ಹೊಸಪೇಟೆ ನಗರದ ಜಂಬುನಾಥ ರಸ್ತೆಯಲ್ಲಿರುವ ಅವರ ಮನೆ, ಹಾಗೂ ಸಮರ್ಥ ಖಾಸಗಿ ಆಸ್ಪತ್ರೆ ಮತ್ತು ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ, ಸಚಿನ್, ಪಿಐ ಅಮರೇಶ್, ರಾಜೇಶ್ ಲಮಾಣಿ, ಹಾಗೂ ಕೊಪ್ಪಳ ಮತ್ತು ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳು ಒಳಗೊಂಡ ತಂಡವು ದಾಳಿಯನ್ನು ನಡೆಸುತ್ತಿದೆ.
ಸದ್ಯ, ಬೆಳಗ್ಗೆಯೇ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ಡಿಎಚ್‌ಓ ಅವರ ಆದಾಯಕ್ಕೆ ಮೀರಿದ ಆಸ್ತಿ ಅಥವಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.






