ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಗರದ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಹೊಸಹಳ್ಳಿ (Hoshahalli) ಯಿಂದ ಕಡಬಗೆರೆ ಕ್ರಾಸ್ (Kadabagere Cross) ವರೆಗಿನ ಆರೆಂಜ್ ಬಣ್ಣದ ಲೇನ್ (Orange Line) ನಿರ್ಮಾಣಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದು, ಮುಂದಿನ ಆರು ತಿಂಗಳಲ್ಲಿ ಟೆಂಡರ್ ಕರೆಯಲು ಯೋಜಿಸಿದೆ.
ಡಬಲ್ ಡೆಕ್ಕರ್ ಯೋಜನೆಯ ವಿಶೇಷತೆಗಳು:
ಈ ಲೇನ್‌ನ ಪ್ರಮುಖ ವಿಶೇಷತೆ ಎಂದರೆ, ಇದು ಡಬಲ್ ಡೆಕ್ಕರ್ (Double Decker) ಯೋಜನೆಯಾಗಿದ್ದು, ರಸ್ತೆಯ ಮೇಲೆ ಫ್ಲೈಓವರ್ (Flyover) ಇರಲಿದೆ ಮತ್ತು ಅದರ ಮೇಲೆ ಮೆಟ್ರೋ ಲೇನ್ ನಿರ್ಮಾಣವಾಗಲಿದೆ. ಈ ವಿಶಿಷ್ಟ ವಿನ್ಯಾಸದಿಂದಾಗಿ ಇದು ರಾಜ್ಯದ ಅತಿ ಎತ್ತರದ ಮೆಟ್ರೋ ಲೇನ್ ಎಂದು ಕರೆಸಿಕೊಳ್ಳಲಿದೆ.
ಹಾಗೂ ಆರೆಂಜ್ ಲೇನ್ 12.5 ಕಿಲೋ ಮೀಟರ್ ಉದ್ದ ಇರಲಿದ್ದು, ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮತ್ತು ಕಡಬಗೆರೆ ಎಂಬ 9 ನಿಲ್ದಾಣಗಳನ್ನು ಒಳಗೊಂಡಿದೆ.
ಜೂನ್ 2026 ರಲ್ಲಿ ಕಾಮಗಾರಿಯನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಡಬಲ್ ಡೆಕ್ಕರ್ ಆಗಿರುವುದರಿಂದ ಇದರ ನಿರ್ಮಾಣಕ್ಕೆ ಹೆಚ್ಚು ಸಮಯ ಮತ್ತು ಹಣದ ಅವಶ್ಯಕತೆಯಿದೆ. ಈ ಲೇನ್ ಅನ್ನು ಪೂರ್ಣಗೊಳಿಸಲು ಸುಮಾರು 5.5 ವರ್ಷಗಳ ಗಡುವು ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ, ಮೆಟ್ರೋ ನಿರ್ಮಾಣವು ವರ್ಷಕ್ಕೆ 7-8 ಕಿಮೀ ವೇಗದಲ್ಲಿ ನಡೆಯುತ್ತದೆ. ಆದರೆ, ಈ ಡಬಲ್ ಡೆಕ್ಕರ್ ಯೋಜನೆಯಲ್ಲಿ ನಿರ್ಮಾಣದ ವೇಗ ವರ್ಷಕ್ಕೆ 3 – 5 ಕಿಮೀಗೆ ಇಳಿಯಲಿದೆ. ಎತ್ತರದ ಈ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಒಟ್ಟಾರೆಯಾಗಿ 15,611 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.






