ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಎಫ್‌ಐಆರ್ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಚಾರ್ಜ್‌ಶೀಟ್ ಅಥವಾ ಪ್ರಕ್ರಿಯೆಗಳನ್ನು ಪರಿಗಣಿಸಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಇಡಿ ನಡೆಸುತ್ತಿರುವ ತನಿಖೆಯು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದಾಖಲಿಸಿದ ಖಾಸಗಿ ದೂರು ಮತ್ತು ಮ್ಯಾಜಿಸ್ಟ್ರೇಟ್ ಅವರ ಸಮನ್ಸ್ ಆದೇಶಗಳನ್ನು ಆಧರಿಸಿದೆಯೇ ಹೊರತು, ಯಾವುದೇ ಮೂಲ ಎಫ್‌ಐಆರ್ (ಪೊಲೀಸ್ ದೂರು) ಆಧಾರದ ಮೇಲಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಫ್‌ಐಆರ್ ಇಲ್ಲದ ಕಾರಣ, ಇಡಿ ಸಲ್ಲಿಸಿದ ಚಾರ್ಜ್‌ಶೀಟ್ ಅಡಿಯಲ್ಲಿ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದೇ ವೇಳೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಈ ಹಂತದಲ್ಲಿ ಎಫ್‌ಐಆರ್ ಪ್ರತಿಯನ್ನು ಪಡೆಯುವ ಹಕ್ಕಿಲ್ಲ ಎಂದು ಹೇಳಿದ ನ್ಯಾಯಾಲಯ, ಇಡಿ ತನ್ನ ತನಿಖೆಯನ್ನು ಮುಂದುವರಿಸಬಹುದು ಎಂದು ಅನುಮತಿ ನೀಡಿದೆ.
ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, “ಸತ್ಯಕ್ಕೆ ಜಯವಾಗಿದೆ,” ಎಂದು ಬಣ್ಣಿಸಿದೆ. “ಇದು ಮೋದಿ ಸರ್ಕಾರದ ರಾಜಕೀಯ ದ್ವೇಷದ ತನಿಖೆ ಎಂಬುದು ಸಾಬೀತಾಗಿದೆ. ಯಾವುದೇ ಮನಿ ಲಾಂಡರಿಂಗ್ ನಡೆದಿಲ್ಲ, ಆದರೂ ನಮ್ಮ ನಾಯಕರ ತೇಜೋವಧೆ ಮಾಡಲು ಸುಳ್ಳು ಕೇಸ್ ಹಾಕಲಾಗಿತ್ತು. ಇಂದು ನ್ಯಾಯಾಲಯದ ತೀರ್ಪಿನಿಂದ ಸರ್ಕಾರದ ದುರುದ್ದೇಶಪೂರಿತ ನಡೆ ಬಯಲಾಗಿದೆ” ಎಂದು ಕಾಂಗ್ರೆಸ್ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿರುವ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, “ಕಾಂಗ್ರೆಸ್ ನಾಯಕರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರಕರಣ 2008ರಷ್ಟು ಹಳೆಯದು ಮತ್ತು ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮುನ್ನವೇ ಖಾಸಗಿ ದೂರು ದಾಖಲಾಗಿತ್ತು. ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸೋನಿಯಾ ಮತ್ತು ರಾಹುಲ್ ವಿರುದ್ಧ ಕ್ರಿಮಿನಲ್ ಪಿತೂರಿ (ಸೆಕ್ಷನ್ 120B) ಮತ್ತು ವಂಚನೆ (ಸೆಕ್ಷನ್ 420) ಆರೋಪಗಳಿವೆ. ಕಾನೂನು ತನ್ನ ಕೆಲಸ ಮಾಡಲಿದೆ” ಎಂದು ತಿರುಗೇಟು ನೀಡಿದ್ದಾರೆ.






