ಮಂಗಳೂರು: ನಟ ರಿಷಬ್ ಶೆಟ್ಟಿ (Rishab Shetty)ಅವರ ‘ಹರಕೆ ಕೋಲ’ದ ವಿವಾದವು ಒಂದು ಘಟ್ಟ ತಲುಪಿತೆಂದರೆ, ಇದೀಗ ಮತ್ತೊಂದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಹರಕೆ ಕೋಲದ ಬಗ್ಗೆ ಟೀಕೆ ವ್ಯಕ್ತವಾದಾಗ, ದೇವಸ್ಥಾನದ ಆಡಳಿತ ಮಂಡಳಿ ದೈವದ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿತ್ತು. ಇದೀಗ ಆಡಳಿತ ಮಂಡಳಿ ಸಲ್ಲಿಸಿದ ಪ್ರಾರ್ಥನೆಯ ಭಾಷೆ (ಕನ್ನಡ) ಕುರಿತಂತೆ ದೈವಾರಾಧಕರಿಂದಲೇ ಅಪಸ್ವರ ಎದ್ದಿದೆ.
ಹರಕೆ ಕೋಲದ ಬಗ್ಗೆ ಆರಂಭದಿಂದಲೂ ಅಸಮಾಧಾನ ವ್ಯಕ್ತಪಡಿಸಿದ್ದ ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು, ಬಾರೇಬೈಲ್ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೇವಸ್ಥಾನದ ಆಡಳಿತ ಸಮಿತಿಯು ನಡೆಸಿದ ಪ್ರಾರ್ಥನೆಯ ಭಾಷೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ದೈವಾರಾಧನೆಯಲ್ಲಿ ಕನ್ನಡದ ಪ್ರಾರ್ಥನೆಗೆ ಅವಕಾಶವಿಲ್ಲ. ದೈವಗಳಿಗೆ ಅರ್ಥವಾಗುವ ಮಾತೃಭಾಷೆ ತುಳು ಭಾಷೆಯಲ್ಲಿಯೇ (Tulu Language) ಪ್ರಾರ್ಥನೆ ಆಗಬೇಕು. ಇದು ನಿಯಮ ಮತ್ತು ಸಂಪ್ರದಾಯ,” ಎಂದಿದ್ದಾರೆ.
ಕನ್ನಡದಲ್ಲಿ ಪ್ರಾರ್ಥನೆ ಮಾಡಿದರೆ ದೈವಗಳಿಗೆ ಅರ್ಥವಾಗಬೇಕಲ್ಲ? ಕೇವಲ ರಿಷಬ್ ಶೆಟ್ಟಿ ಅವರನ್ನು ತೃಪ್ತಿಪಡಿಸಲು ಕನ್ನಡದಲ್ಲಿ ಪ್ರಾರ್ಥನೆ ಮಾಡಿದಂತಿದೆ. ಮುಂದಿನ ದಿನಗಳಲ್ಲಿ ಬೇರೆ ಭಾಷೆಯ ನಟರು ಬಂದಾಗ ಅವರವರ ಭಾವಕ್ಕೆ ತಕ್ಕಂತೆ ಪ್ರಾರ್ಥನೆ ಮಾಡಬಹುದು. ದೈವಾರಾಧನೆಯನ್ನು ‘ಪ್ಯಾನ್ ಇಂಡಿಯಾ’ (Pan India) ಮಾಡಲು ಹೊರಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಆಡಳಿತ ಮಂಡಳಿ ಪ್ರಾರ್ಥನೆ ಮಾಡಿತ್ತು. ಈ ಬಗ್ಗೆ ನಂಬಿಕೆ ಇದೆ. ಆದರೆ, ತಪ್ಪು ಮಾಡಿದ್ದರೆ ಜಾರಂದಾಯ ದೈವ ನನಗೂ ಶಿಕ್ಷೆ ನೀಡಲಿ, ಎಂದಿರುವ ಅವರು, ಹರಕೆ ಕೋಲದಲ್ಲಿ ಇಷ್ಟು ದೊಡ್ಡ ಸಂಘರ್ಷ ಆಯಿತು, ಇದರ ಜೊತೆಗೆ ಅವರು ಮಾಡಿದ ಪ್ರಾರ್ಥನೆಯೇ ಸರಿ ಇಲ್ಲ, ಎಂದು ಹೇಳಿದ್ದಾರೆ.
ತಮ್ಮ ಮೇಲೆ ಮಾಡಿರುವ ಆರೋಪಗಳು ಸಾಬೀತಾದರೆ ದೈವಾರಾಧನೆಯನ್ನು ನಿಲ್ಲಿಸುವುದಾಗಿ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ. ಒಂದು ವೇಳೆ ಆರೋಪ ಸಾಬೀತುಪಡಿಸಲು ವಿಫಲರಾದರೆ, ಆಡಳಿತ ಮಂಡಳಿಯ ಸದಸ್ಯರು ಅವರು ತಂತ್ರಿ ಅಲ್ಲ ಕಂತ್ರಿ ಎಂದು ಹೇಳುತ್ತೇನೆ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.






