ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು. ಮಂಗಳವಾರ ಮುಂಜಾನೆ 7:25ರ ಸುಮಾರಿಗೆ ಭಟ್ಕಳ ತಹಸೀಲ್ದಾರ್ ಅವರ ಇಮೇಲ್ ಐಡಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶವೊಂದು ಬಂದಿದೆ. ತಹಸೀಲ್ದಾರ್ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಕೂಡಲೇ, ಇನ್ಸ್‌ಪೆಕ್ಟರ್ ಸ್ಥಳಕ್ಕೆ ತೆರಳಿ ಕಚೇರಿ ಆವರಣವನ್ನು ಮುಚ್ಚಿಸಿದ್ದಾರೆ ಹಾಗೂ ಕಾರವಾರದಿಂದ ಬಾಂಬ್ ಸ್ಕ್ವಾಡ್ ಮತ್ತು ಎಎಸಿ (ASC) ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸಲಾಗಿದೆ.
ಈ ಘಟನೆಯ ಕುರಿತು ಮಾತನಾಡಿದ ಎಸ್ಪಿ ದೀಪನ್ ಎಂ.ಎನ್, ಭಟ್ಕಳದ ಘಟನೆಯ ನಂತರ ಕಾರವಾರ ತಹಸೀಲ್ದಾರ್ ಇಮೇಲ್ ಐಡಿಗೂ ಇದೇ ರೀತಿಯ ಬೆದರಿಕೆ ಸಂದೇಶ ಬಂದಿದೆ ಎಂದು ತಿಳಿಸಿದ್ದಾರೆ. ನೆನ್ನೆ ಮಂಗಳೂರು ಮತ್ತು ಹಾಸನದಲ್ಲಿಯೂ ಇಂತಹದೇ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಅಲ್ಲಿಯೂ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಬೆದರಿಕೆಗಳ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಮೇಲ್ ಮೂಲ ಮತ್ತು ಅದರ ಹಿಂದಿರುವ ಉದ್ದೇಶವನ್ನು ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ.
ಈ ಹಿಂದೆ ಜುಲೈ 10 ರಂದು ಭಟ್ಕಳ ಪೊಲೀಸ್ ಠಾಣೆಗೆ ಇದೇ ರೀತಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದಾಗ (ಪ್ರಕರಣ ಸಂಖ್ಯೆ 84/2025), ಪೊಲೀಸರು ತ್ವರಿತವಾಗಿ ಆರೋಪಿಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದರು ಹಾಗೂ ಈ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಾರೆ ಎಂದು ಎಸ್ಪಿ ಸ್ಮರಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಇಲಾಖೆಯು ಎಚ್ಚರಿಕೆಯಿಂದಿರಲು ಸೂಚಿಸಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ವಿಚಾರಣೆ ನಡೆಸುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ಬಾಂಬ್ ಸ್ಕ್ವಾಡ್ ತಪಾಸಣೆ ನಡೆಸಿ ಸ್ಥಳ ಸುರಕ್ಷಿತವೆಂದು ಖಚಿತಪಡಿಸಿದ ನಂತರ, ಬಿಗಿ ಬಂದೋಬಸ್ತ್ ಏರ್ಪಡಿಸಿ, ತಪಾಸಣೆ ನಡೆಸಿದ ಬಳಿಕವಷ್ಟೇ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಕಚೇರಿಯೊಳಗೆ ಪ್ರವೇಶ ನೀಡಲಾಗುವುದು ಎಂದು ಎಸ್ಪಿ ದೀಪನ್ ಎಂ.ಎನ್ ತಿಳಿಸಿದ್ದಾರೆ.






