Home State Politics National More
STATE NEWS

NIA Court | ನೌಕಾನೆಲೆ ಗೂಢಚಾರಿಕೆ ಪ್ರಕರಣ: ಕಾರವಾರದಲ್ಲಿ ಸೆರೆ ಸಿಕ್ಕಿದ್ದ ಆರೋಪಿ ಸೇರಿ ಇಬ್ಬರಿಗೆ ಜೈಲು ಶಿಕ್ಷೆ

Visakhapatnam navy spying case nia court sentences
Posted By: Sagaradventure
Updated on: Dec 16, 2025 | 5:08 AM

NIA Court | ನೌಕಾನೆಲೆ ಗೂಢಚಾರಿಕೆ ಪ್ರಕರಣ: ಕಾರವಾರದಲ್ಲಿ ಸೆರೆ ಸಿಕ್ಕಿದ್ದ ಆರೋಪಿ ಸೇರಿ ಇಬ್ಬರಿಗೆ ಜೈಲು ಶಿಕ್ಷೆ

​ಕಾರವಾರ: ಪಾಕಿಸ್ತಾನದ ಕುಮ್ಮಕ್ಕಿನೊಂದಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣ ನೌಕಾನೆಲೆಯಲ್ಲಿ ಗೂಢಚಾರಿಕೆ ನಡೆಸುತ್ತಿದ್ದ (ವೈಜಾಗ್ ನೇವಿ ಸ್ಪೈಯಿಂಗ್ ಕೇಸ್) ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯವು ಸೋಮವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು, ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದವರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಶಿಕ್ಷೆಗೊಳಗಾದವರನ್ನು ಮಹಾರಾಷ್ಟ್ರದ ಅಹ್ಮದ್‌ನಗರ ಮೂಲದ ಸೋಮನಾಥ್ ಸಂಜಯ್ ಇಕಾಡೆ ಮತ್ತು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸೋನು ಕುಮಾರ್ ಎಂದು ಗುರುತಿಸಲಾಗಿದೆ. ಈ ಪೈಕಿ ಸೋಮನಾಥ್ ಸಂಜಯ್ ಇಕಾಡೆ ಎಂಬಾತನನ್ನು 2019ರ ಡಿಸೆಂಬರ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಂಧಿಸಲಾಗಿತ್ತು ಎಂಬುದು ಗಮನಾರ್ಹ. ಇನ್ನೊಬ್ಬ ಆರೋಪಿ ಸೋನು ಕುಮಾರ್‌ನನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬಂಧಿಸಲಾಗಿತ್ತು.

ಆರೋಪಿಗಳಿಬ್ಬರಿಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೆಕ್ಷನ್ 18 ಮತ್ತು ಅಧಿಕೃತ ರಹಸ್ಯ ಕಾಯ್ದೆಯ (Official Secrets Act) ಸೆಕ್ಷನ್ 3ರ ಅಡಿಯಲ್ಲಿ ತಲಾ 5 ವರ್ಷ, 11 ತಿಂಗಳು ಮತ್ತು 15 ದಿನಗಳ ಸಾಧಾರಣ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ, ತಲಾ 5,000 ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವಿಶಾಖಪಟ್ಟಣದ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

​ಏನಿದು ಪ್ರಕರಣ?

ವಿದೇಶಿ ಏಜೆಂಟರ ಮೂಲಕ ಭಾರತೀಯ ನೌಕಾಪಡೆಯ ಆಯಕಟ್ಟಿನ ಸ್ಥಳಗಳು ಮತ್ತು ಪ್ರಮುಖ ನೆಲೆಗಳ ಮೇಲೆ ಗೂಢಚಾರಿಕೆ ನಡೆಸುತ್ತಿದ್ದ ಗಂಭೀರ ಪ್ರಕರಣ ಇದಾಗಿದೆ. ಆಂಧ್ರಪ್ರದೇಶದ ಪೊಲೀಸ್ ಇಲಾಖೆಯಿಂದ 2019ರ ಡಿಸೆಂಬರ್‌ನಲ್ಲಿ ಎನ್‌ಐಎ ಈ ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶ ಹೊಂದಿದ್ದ ಈ ಜಾಲದ ವಿರುದ್ಧ ಎನ್‌ಐಎ ಒಟ್ಟು 15 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸದ್ಯ ಉಳಿದ 5 ಆರೋಪಿಗಳ ವಿರುದ್ಧದ ವಿಚಾರಣೆ ಮುಂದುವರಿದಿದೆ.

Shorts Shorts