Home State Politics National More
STATE NEWS

Wife Kidnap: ಮಗಳಿಗಾಗಿ ಪತ್ನಿಯನ್ನೇ ಕಿಡ್ನಾಪ್ ಮಾಡಿದ್ದ ನಿರ್ಮಾಪಕ ಹರ್ಷವರ್ಧನ್!

Bangalore story (1)
Posted By: Meghana Gowda
Updated on: Dec 16, 2025 | 10:34 AM

ಬೆಂಗಳೂರು: ಕೌಟುಂಬಿಕ ಕಲಹದಿಂದ ದೂರವಾಗಿದ್ದ ಪತ್ನಿ ಮತ್ತು ಮಗಳನ್ನು ಪಡೆಯಲು ಚಿತ್ರ ನಿರ್ಮಾಪಕರೊಬ್ಬರು ತಮ್ಮ ಪತ್ನಿಯನ್ನೇ ಕಿಡ್ನಾಪ್ ಮಾಡಿರುವ  ಘಟನೆ ಬೆಂಗಳೂರಿನಲ್ಲಿ ನಡೆದಿದೆ. ‘ವರ್ಧನ್ ಎಂಟರ್‌ಪ್ರೈಸಸ್’ ಮಾಲೀಕ ಹಾಗೂ ನಿರ್ಮಾಪಕನಾದ ಹರ್ಷವರ್ಧನ್ (Producer Harshavardhan)ವಿರುದ್ಧ  ಕಿಡ್ನಾಪ್ (Kidnap) ಆರೋಪ ಕೇಳಿಬಂದಿದೆ.

ಹರ್ಷವರ್ಧನ್ ಮತ್ತು ನಟಿ ಚೈತ್ರಾ ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ ಒಂದು ವರ್ಷದ ಹೆಣ್ಣುಮಗುವಿದೆ. ಕೌಟುಂಬಿಕ ಕಲಹದ ಕಾರಣದಿಂದ ಚೈತ್ರಾ ಮಗಳೊಂದಿಗೆ ಬೆಂಗಳೂರಿಗೆ ಬಂದು ಪ್ರತ್ಯೇಕವಾಗಿದ್ದರು. ಇದರಿಂದ ಬೇಸರಗೊಂಡಿದ್ದ ಹರ್ಷವರ್ಧನ್, ಮಗಳನ್ನು ಪಡೆಯುವ ಉದ್ದೇಶದಿಂದ ಪತ್ನಿಯನ್ನೇ ಅಪಹರಿಸಲು ಯೋಜಿಸಿದ್ದರು.

ಹರ್ಷವರ್ಧನ್ ತನ್ನ ಸ್ನೇಹಿತ ಕೌಶೀಕ್ ಮೂಲಕ ನಟಿ ಚೈತ್ರಾಗೆ ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಹೇಳಿಸಿ ₹20 ಸಾವಿರ ಅಡ್ವಾನ್ಸ್ ನೀಡಿದ್ದ. ನಂತರ, ಪಿಕ್ ಅಪ್ ನೆಪದಲ್ಲಿ ಮೈಸೂರು ರಸ್ತೆ ಮೂಲಕ ನೈಸ್ ರಸ್ತೆಯಲ್ಲಿ ನಟಿ ಚೈತ್ರಾಳನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಪಹರಣದ ನಂತರ, ಚೈತ್ರಾಳ ತಾಯಿಗೆ ಕರೆ ಮಾಡಿದ ಹರ್ಷವರ್ಧನ್, ನಿನ್ನ ಮಗಳನ್ನ ಕಿಡ್ನ್ಯಾಪ್ ಮಾಡಿದ್ದೇನೆ. ನನ್ನ ಮಗಳನ್ನು ತಂದು ಒಪ್ಪಿಸಿದರೆ, ನಿಮ್ಮ ಮಗಳನ್ನು ಸೇಫಾಗಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಈ ಸಂಬಂಧ ನಟಿ ಚೈತ್ರಾಳ (Actress Chaitra) ಸಹೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ (Byatarayanapura Police Station) ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿ ನಿರ್ಮಾಪಕ ಹರ್ಷವರ್ಧನ್ ತಾನೇ ಬಂದು ಪತ್ನಿಯನ್ನು ಮನೆಯವರಿಗೆ ಒಪ್ಪಿಸಿದ್ದಾನೆ. ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಹರ್ಷವರ್ಧನ್ ಮತ್ತು ನಟಿ ಚೈತ್ರಾ ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ, ಇದು ಕೌಟುಂಬಿಕ ಕಲಹ ಎಂದು ಹೇಳಿಕೊಂಡಿರುವ ದಂಪತಿ, ಪರಸ್ಪರ ಮಾತನಾಡಿಕೊಂಡು ಸರಿಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ದಂಪತಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ. ಆರೋಪಿಯನ್ನು ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಿ, ಸದ್ಯಕ್ಕೆ ಬಿಟ್ಟು ಕಳುಹಿಸಿದ್ದಾರೆ.

Shorts Shorts