ಬೆಂಗಳೂರು: ವೈದ್ಯಕೀಯ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಹೃದಯಾಘಾತದಿಂದ ನರಳುತ್ತಿದ್ದ 34 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಪತಿಯ ಪ್ರಾಣ ಉಳಿಸಲು ಪತ್ನಿ ದಾರಿಹೋಕರಲ್ಲಿ ಗೋಗರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.
ಮೃತ ವ್ಯಕ್ತಿಯನ್ನು ವೆಂಕಟರಮಣನ್ (34) ಎಂದು ಗುರುತಿಸಲಾಗಿದೆ. ಡಿಸೆಂಬರ್ 13 ರಂದು ಮುಂಜಾನೆ 3.30 ರ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪತ್ನಿ ರೂಪಾ ಅವರು ಪತಿಯನ್ನು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ನಗರದ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಯಿತು ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ ಎಂದು ರೂಪಾ ಆರೋಪಿಸಿದ್ದಾರೆ.
“ನಾವು ಹೋದ ಮೊದಲ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿಲ್ಲ ಎಂದು ಬೇರೆಡೆಗೆ ಕಳುಹಿಸಿದರು. ಎರಡನೇ ಆಸ್ಪತ್ರೆಯಲ್ಲಿ ಇಸಿಜಿ (ECG) ಮಾಡಿ ಹೃದಯಾಘಾತವಾಗಿದೆ ಎಂದು ದೃಢಪಡಿಸಿದರು. ಆದರೆ, ಯಾವುದೇ ಪ್ರಾಥಮಿಕ ಚಿಕಿತ್ಸೆ ನೀಡದೆ ಜಯದೇವ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು” ಎಂದು ರೂಪಾ ಕಣ್ಣೀರು ಹಾಕಿದ್ದಾರೆ.
ಎರಡನೇ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ವೇಗವಾಗಿ ಹೋಗುವಾಗ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಬಿದ್ದ ರಭಸಕ್ಕೆ ಪತಿ ನರಳಾಡುತ್ತಿದ್ದರು. “ಸುಮಾರು 15 ನಿಮಿಷಗಳ ಕಾಲ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರ ಕಾಲಿಗೆ ಬಿದ್ದು ಬೇಡಿಕೊಂಡೆ. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಟ್ಯಾಕ್ಸಿ ಚಾಲಕರೊಬ್ಬರು ನೆರವಿಗೆ ಬಂದರು. ನಾವು ಬಿದ್ದಾಗ ಪತಿ ಜೀವಂತವಾಗಿದ್ದರು. ಯಾರಾದರೂ ತಕ್ಷಣ ಸಹಾಯ ಮಾಡಿದ್ದರೆ ಅವರನ್ನು ಉಳಿಸಿಕೊಳ್ಳಬಹುದಿತ್ತು” ಎಂದು ರೂಪಾ ಅಳಲು ತೋಡಿಕೊಂಡಿದ್ದಾರೆ.
ಟ್ಯಾಕ್ಸಿ ಚಾಲಕರ ಸಹಾಯದಿಂದ ಮೂರನೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಈ ಕುರಿತು ಎರಡನೇ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅವರು ನಿರ್ಲಕ್ಷ್ಯದ ಆರೋಪವನ್ನು ತಳ್ಳಿಹಾಕಿದ್ದಾರೆ. “ಹೃದಯಾಘಾತ ದೃಢಪಟ್ಟ ತಕ್ಷಣ ನಾವು ‘ಲೋಡಿಂಗ್ ಡೋಸ್’ ನೀಡಿದ್ದೇವೆ. ಆದರೆ ನಮ್ಮಲ್ಲಿ ಹೃದಯ ಸಂಬಂಧಿ ತಜ್ಞರಿಲ್ಲದ ಕಾರಣ ಜಯದೇವ ಆಸ್ಪತ್ರೆಗೆ ಶಿಫಾರಸು ಮಾಡಿದೆವು. ಆಂಬ್ಯುಲೆನ್ಸ್ ಬರುವವರೆಗೆ ಕಾಯಲು ಹೇಳಿದೆವು. ಆದರೆ ಅವರು ನಮ್ಮ ಪ್ರಿಸ್ಕ್ರಿಪ್ಷನ್ ಕೂಡ ತೆಗೆದುಕೊಳ್ಳದೆ ಅವಸರದಲ್ಲಿ ಹೊರಟುಹೋದರು” ಎಂದು ಆಸ್ಪತ್ರೆಯ ಪ್ರತಿನಿಧಿ ತಿಳಿಸಿದ್ದಾರೆ.
ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟರಮಣನ್ ಅವರು ಪತ್ನಿ, ಐದು ವರ್ಷದ ಮಗ ಮತ್ತು 18 ತಿಂಗಳ ಮಗಳನ್ನು ಅಗಲಿದ್ದಾರೆ. ಇಂತಹ ದುಃಖದ ಸಮಯದಲ್ಲೂ ಕುಟುಂಬಸ್ಥರು ವೆಂಕಟರಮಣನ್ ಅವರ ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಂಗಾಂಗ ದಾನಕ್ಕೂ ಇಚ್ಛಿಸಿದ್ದೆವು, ಆದರೆ ವೈದ್ಯಕೀಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಪತ್ನಿ ತಿಳಿಸಿದ್ದಾರೆ.






