ಬೆಂಗಳೂರು: ನಗರದ ಅಮೃತಹಳ್ಳಿ (Amrutahalli) ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಣ್ಣ ಪಾಳ್ಯದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿಮೀರಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗವನ್ನ ತೋರಿಸಿ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, 30ಕ್ಕೂ ಹೆಚ್ಚು ಮಂದಿಯ ಗ್ಯಾಂಗ್ ಸಿನಿಮಾ ಸ್ಟೈಲ್‌ನಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ 14ರಂದು ಪುಷ್ಪರಾಣಿ ಎಂಬುವವರು ತಮ್ಮ ಪತಿಯೊಂದಿಗೆ ಅಂಗಡಿಗೆ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಕಾರ್ತಿಕ್ (22) (Karthik) ಎಂಬ ಯುವಕ, ಪುಷ್ಪರಾಣಿ ಅವರ ಮುಂದೆ ಬಂದು ನಿಂತು, ಪ್ಯಾಂಟ್ ಬಿಚ್ಚಿ ತನ್ನ ಖಾಸಗಿ ಅಂಗವನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಈ ಅಸಭ್ಯ ವರ್ತನೆಯನ್ನು ದಂಪತಿಗಳು ಪ್ರಶ್ನಿಸಿದ್ದು, ನಂತರ ಅಲ್ಲಿಂದ ತಮ್ಮ ಮನೆಗೆ ವಾಪಸ್ ಬಂದಿದ್ದಾರೆ.
ದಂಪತಿಗಳು ಪ್ರಶ್ನಿಸಿದ್ದನ್ನೇ ನೆಪವಾಗಿಸಿಕೊಂಡ ಕಾರ್ತಿಕ್, ತನ್ನ ಗ್ಯಾಂಗ್ (Gang Attack) ಕಟ್ಟಿಕೊಂಡು ಪುಷ್ಪರಾಣಿ ಮತ್ತು ಶ್ಯಾಮ ಅವರ ಮನೆಗೆ ಕಾರ್ತಿಕ್, ಸ್ವಾಮಿ, ಮೈಕಲ್, ದೇವ, ಕಿರಣ್, ಟುನ್ ಟುನ್ ದಾಸ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಮಚ್ಚು, ಕ್ರಿಕೆಟ್ ಬ್ಯಾಟ್ ಹಿಡಿದು ಮನೆಗೆ ಮುತ್ತಿಗೆ ಹಾಕಿದ್ದಾರೆ.
ಈ ವೇಳೆ ಮನೆಯ ಕಿಟಕಿ ಗಾಜುಗಳು, ಬಾಗಿಲು, ಸಿಸಿಟಿವಿ ಕ್ಯಾಮರಾ ಮತ್ತು ಹೂವಿನ ಕುಂಡಗಳನ್ನು ಪುಡಿಪುಡಿ ಮಾಡಿದ್ದಾರೆ. ಹಾಗೂ ಮನೆಯಲ್ಲಿದ್ದ ದಂಪತಿ ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಕಿಡಿಗೇಡಿಗಳ ಈ ರೌಡಿಸಂ ಕಂಡು ಮಕ್ಕಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಪೊಲೀಸರು (police) ಸ್ಥಳಕ್ಕೆ ಬರುವ ಸುಳಿವು ಸಿಗುತ್ತಿದ್ದಂತೆಯೇ ಈ ಗ್ಯಾಂಗ್ ಅಲ್ಲಿಂದ ಪರಾರಿಯಾಗಿದೆ. ನೊಂದ ಮಹಿಳೆ ಪುಷ್ಪರಾಣಿ ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.






